ಬೆಂಗಳೂರು: ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ನೂರಾರು ಕೋಟಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇರೆಗೆ ಕಣ್ವ ಗ್ರೂಪ್‍ನ 255.17 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ಥಿಯನ್ನಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಕಣ್ವ ಗ್ರೂಪ್ ಆಫ್ ಕಂಪನೀಸ್, ಕಣ್ವ ಸಹಕಾರ ಕ್ರೆಡಿಟ್ ಕೋಆಪರೇಟಿವ್ ಸಂಸ್ಥೆಗಳ ಮೂಲಕ ಜನರಿಂದ ವಿವಿಧ ಸ್ಕೀಂಗಳ ಹೆಸರಿನಲ್ಲಿ 650 ಕೋಟಿ ರೂ ಹಣ ಸಂಗ್ರಹಿದೆ. ಆದರೆ, ಮೆಚ್ಯುರಿಟಿ ಅವಧಿ ಬಳಿಕವೂ ಠೇವಣಿ ಹಣವನ್ನು ವಾಪಸ್ ನೀಡಿಲ್ಲ.
ಹೀಗೆ ಜನರಿಂದ ಸಂಗ್ರಹಿಸಿದ ನೂರಾರು ಕೋಟಿ ಹಣದಿಂದ ಕಣ್ವ ಗ್ರೂಪ್‍ನ ಮಾಲೀಕ ಎನ್.ನಂಜುಂಡಯ್ಯ ಮತ್ತು ಕುಟುಂಬದವರ ಹೆಸರಿನಲ್ಲಿ ರಾಜ್ಯದ ವಿವಿಧೆಡೆಗಳಿಂದ ಕೃಷಿ, ಕೃಷಿಯೇತರ ಭೂಮಿ, ಕಟ್ಟಡ ಹಾಗೂ ರೆಸಾರ್ಟ್‍ಗಳನ್ನು ಖರೀದಿಸಲಾಗಿದೆ. ಜತೆಗೆ ವಿವಿಧ ಬ್ಯಾಂಕ್‍ಗಳಲ್ಲಿ ಅಕ್ರಮವಾಗಿ ಹಣ ಇಡಲಾಗಿದೆ.
ಈ ಹಿನ್ನೆಲೆಯಲ್ಲಿ ಕಣ್ವ ಗ್ರೂಪ್‍ನ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್‍ನಲ್ಲಿರುವ ಹಣ ಸೇರಿದಂತೆ ಚರಾಸ್ತಿ ಸೇರಿದಂತೆ 255.17 ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರ ಹಣ ದುರುಪಯೋಗ ಆರೋಪದಡಿ ಬೆಂಗಳೂರಿನ ಬಸವೇಶ್ವರ ನಗರ, ವಿಜಯನಗರ ಪೊಲೀಸ್ ಠಾಣೆಗಳು, ರಾಜ್ಯ ಸಹಕಾರ ಸಂಘಗಳ ರೆಜಿಸ್ಟ್ರಾರ್‍ನಲ್ಲಿ ಸಾರ್ವಜನಿಕರು ನೀಡಿದ ದೂರುಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ ಕಣ್ವ ಗ್ರೂಪ್ ವಿರುದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಕರಣದ ತನಿಖೆ ಚುರುಕುಗೊಳಿಸಿರುವ ಇ.ಡಿ ಅಧಿಕಾರಿಗಳು ಕಣ್ವ ಗ್ರೂಪ್‍ನ ಮಾಲೀಕ ಎನ್. ನಂಜುಂಡಯ್ಯನನ್ನು ಕೋರ್ಟ್‍ಗೆ ಹಾಜರುಪಡಿಸಿ 7 ದಿನಗಳ ಕಸ್ಟಡಿಗೆ ಪಡೆದಿದ್ದರು. ನಂಜುಂಡಯ್ಯನ ಇಡಿ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.