ಶಾಲೆಗಳ ಪುನಾರಂಭದ ಬಗ್ಗೆ ಶಿಕ್ಷಣ ಸಚಿವರಿಂದ ಸ್ಪಷ್ಟನೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾನಗರಗಳಲ್ಲಿ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಆನ್ ಲೈನ್ ತರಗತಿಗಳು ನಡೆಯುತ್ತಿವೆ. ಇದಲ್ಲದೇ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ತಾಲೂಕುವಾರು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಮಧ್ಯೆ ಶಾಲೆಗಳ ಪುನಾರಂಭದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಮಹಾನಗರಗಳಲ್ಲೂ ಶಾಲೆಗಳನ್ನು ಪುನಾರಂಭಿಸಲಾಗುವುದು. ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಶಾಲೆ ತೆರೆಯುವುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಳೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ ಶೇ. 80 ರಷ್ಟು ಪಠ್ಯ ಕ್ರಮ ಕಂಪ್ಲೀಟ್ ಮಾಡಿದ್ದೇವೆ. ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ಪರಿಶೀಲನೆ ಮಾಡಿದ್ದೇವೆ. ನಾಳೆ ಸಿಎಂ ಸಭೆಯಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.









