1 ರಿಂದ 8ನೇ ತರಗತಿ ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವ ಮಾಹಿತಿ
ಹುಬ್ಬಳ್ಳಿ : ರಾಜ್ಯದಲ್ಲಿ ಮೊದಲ ಹಂತವಾಗಿ 9 ರಿಂದ 12 ನೇ ತರಗತಿಯವರೆಗೂ ತರಗತಿಗಳನ್ನು ಆರಂಭಿಸಲಾಗಿದೆ. ಈ ಮಧ್ಯೆ 1 ರಿಂದ 8 ನೇ ತರಗತಿ ಶಾಲೆಗಳನ್ನು ಆರಂಭಿಸುವ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದು, 1 ರಿಂದ 8ನೇ ತರಗತಿ ಶಾಲೆಗಳನ್ನು ಆರಂಭಿಸುವ ಕುರಿತು ಆಗಸ್ಟ್ 30ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಗಸ್ಟ್ 23 ರಿಂದ 9ನೇ ತರಗತಿಯಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ.
ಅದರ ಸಾಧಕ-ಬಾಧಕಗಳನ್ನು ಅವಲೋಕಿಸಿ 1 ರಿಂದ 8ನೇ ತರಗತಿಗಳ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಸದ್ಯ ಆರಂಭವಾದ ಶಾಲೆಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರಿಂದ ಉತ್ತಮ ಉತ್ಸಾಹ ಕಂಡುಬಂದಿದೆ.
ಇದರಿಂದ ಶಾಲೆಗಳನ್ನು ಆರಂಭಿಸಬೇಕೆಂಬ ಆಲೋಚನೆ ವ್ಯಕ್ತವಾಗುತ್ತಿದೆ. ಆದರೆ ತಾಂತ್ರಿಕ ಸಮಿತಿಯ ವರದಿ ಮೇಲೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಶಿಕ್ಷಕರ ವರ್ಗಾವಣೆ ಬಗ್ಗೆ ಮಾತನಾಡಿದ ಸಚಿವರು, ಹೆಚ್ಚಿನ ಶಿಕ್ಷಕರಿಗೆ ಅನುಕೂಲವಾಗುವಂತೆ ಶಿಕ್ಷಕರ ವರ್ಗಾವಣೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 5 ರಿಂದ ಕೌನ್ಸಲಿಂಗ್ ಆರಂಭವಾಗಲಿದೆ. ಆ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.









