10 ವರ್ಷ ಜೈಲು ಸೇರಿದ ಟಿಕ್ ಟಾಕ್ ಸ್ಟಾರ್ – ಕಾರಣ ಏನು..?
ಈಜಿಪ್ಟ್ : ಮಾನವ ಕಳ್ಳಸಾಗಣೆ ಆರೋಪದ ವಿಚಾರಣೆ ಕುರಿತು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಿದ್ದಕ್ಕೆ ಈಜಿಪ್ಟ್ ನ ಟಿಕ್ ಟಾಕ್ ಸ್ಟಾರ್ ಹನೀನ್ ಹೋಸಮ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೈರೊ ನ್ಯಾಯಾಲಯ ಆದೇಶ ಮಾಡಿದೆ. ಹನೀನ್ ಹೋಸಮ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದಿದ್ದಕ್ಕೆ ದೀರ್ಘ ಶಿಕ್ಷೆಗೆ ಗುರಿಪಡಿಸಲಾಗಿದೆ‘ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.
ಪೊಲೀಸರು 19 ವರ್ಷದ ಹನೀನ್ನನ್ನ ಬಂಧಿಸಿದ್ದಾರೆ. ಅಲ್ಲದೇ, ಕುಟುಂಬದ ಮೌಲ್ಯಗಳನ್ನು ಹಾಳುಗೆಡವಿದ್ದಕ್ಕಾಗಿ ಹಾಗೂ ಹದಿಹರೆಯದವರಿಗೆ ಲೈಂಗಿಕ ಚಟುವಟಿಕೆಗೆ ಉತ್ತೇಜಿಸಿರುವ ಪ್ರಕರಣದಡಿ ಇನ್ನೊಬ್ಬ ಯುವತಿ ಯೂಟ್ಯೂಬರ್ ಆದ ಮೌದಾ ಅಲ್ ಅದಮ್ ಹಾಗೂ ಇತರ ನಾಲ್ವರಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಅಳುತ್ತಾ ವಿಡಿಯೋ ಮಾಡಿ ಹರಿಬಿಟ್ಟಿರುವ ಹನಿಮ್ ಹೋಸಮ್, ‘ಇಷ್ಟು ಕಠಿಣ ಶಿಕ್ಷೆ ನೀಡಲು ನಾನು ಯಾವುದೇ ತಪ್ಪು ಮಾಡಿಲ್ಲ. ಪ್ರಕರಣದಲ್ಲಿ ಅದಾಗಲೇ 10 ತಿಂಗಳು ಜೈಲುವಾಸ ಮಾಡಿ ಬಂದಿದ್ದೇನೆ. ಆ ನಂತರ ನಾನು ಯಾವುದೇ ಹೇಳಿಕೆ ನೀಡಿಲ್ಲ. ದಯವಿಟ್ಟು ನನಗೆ ಶಿಕ್ಷೆ ನೀಡಬೇಡಿ‘ ಎಂದು ಮನವಿ ಮಾಡಿದ್ದಾರೆ.
ಕಳೆದ ವರ್ಷ ಟಿಕ್ಟಾಕ್ ವಿಡಿಯೋದಲ್ಲಿ ಹನಿಮ್ ಹೋಸಮ್, ‘ಹುಡುಗಿಯರು ಹಣಕ್ಕಾಗಿ ಮುಕ್ತವಾಗಿ ಕೆಲಸ ಮಾಡಬಹುದು‘ ಎಂದು ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಪ್ರಕರಣ ಅವರ ಮೇಲೆ ದಾಖಲಾಗಿತ್ತು.








