ಮುಂಬೈ : ಭಾರತೀಯ ಚುನಾವಣಾ ಆಯೋಗವು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬಿಗ್ ರಿಲೀಫ್ ನೀಡಿದ್ದು, ಮೇ 27 ರ ಮೊದಲು ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದೆ. ಅಲ್ಲದೆ ಚುನಾವಣೆಯ ಸಮಯದಲ್ಲಿ ಕೋವಿಡ್ ವಿರುದ್ಧ ಸುರಕ್ಷತೆಗಾಗಿ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಿದೆ.
ಏಪ್ರಿಲ್ 24 ರಂದು ತೆರವಾಗಿದ್ದ ರಾಜ್ಯದ ವಿಧಾನ ಪರಿಷತ್ 9 ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಗುರುವಾರ ಮನವಿ ಮಾಡಿದ್ದರು. ಇದೀಗ ಆಯೋಗವು ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಠಾಕ್ರೆ ಪರಿಷತ್ ಸದಸ್ಯರಾಗಿ ತಮ್ಮ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಉದ್ಧವ್ ಠಾಕ್ರೆ ಅವರು ಮೇ 28ಕ್ಕೂ ಮುನ್ನ ವಿಧಾನ ಪರಿಷತ್ ಗೆ ಆಯ್ಕೆಯಾಗಬೇಕಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು.








