Electric Bus : 30 ಸಾವಿರ ವಿದ್ಯುತ್ ಚಾಲಿತ ವಾಹನಗಳಾಗಿ ಪರಿವರ್ತನೆ – ರಾಮುಲು
ಸದ್ಯಕ್ಕೆ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಆದ್ಯತೆಯನ್ನ ನೀಡಲಾಗ್ತಿದೆ.. ಸರ್ಕಾರಿ ಸಾರಿಗೆ ಇಲಾಖೆಯಿಂದಲೂ ಈಗಾಗಲೇ ಎಲೆಕ್ಟ್ರಿಕಲ್ ಬಸ್ ಗಳು ರಸ್ತೆಯಲ್ಲಿ ಓಡಾಟ ನಡೆಸುತ್ತಿವೆ..
ಇದೀಗ ಇನ್ನೂ 30 ಸಾವಿರ ಬಸ್ ಗಳನ್ನು ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿರುವ ಅವರು ಪರಿಸರ ಮಾಲಿನ್ಯ ತಡೆಗಟ್ಟುವುದಕ್ಕಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ 2030ರೊಳಗೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ 30 ಸಾವಿರ ಹಳೆಯ ಬಸ್ ಗಳನ್ನು ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ಜನವರಿ ಅಂತ್ಯದೊಳಗೆ 50 ವಿದ್ಯುತ್ ಚಾಲಿತ ಬಸ್ ಖರೀದಿಸಲಾಗುವುದು. ಅಂತೆಯೇ 600 ಕೆಂಪು ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ.
60 ವೊಲ್ವೊ ಬಸ್ ಖರೀದಿಗೂ ಚಿಂತನೆ ನಡೆಸಿದ್ದೇವೆ. ರಸ್ತೆ ಅವ್ಯವಸ್ಥೆ ಕಾರಣಕ್ಕೆ ಅಪಘಾತ ಸಂಭವಿಸಿದಾಗ ಉಂಟಾಗುವ ಸಾವು ನೋವು ತಪ್ಪಿಸಲು ಅಪಘಾತ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗುವುದು.
ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ 2017ರಿಂದ ಪರಿಷ್ಕರಣೆ ಆಗಿಲ್ಲ. ಸಿಎಂ ಜೊತೆ ಮಾತನಾಡಿ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.