ಚಿತ್ರದುರ್ಗ: ಆನೆ ದಂತ, ಶ್ರೀಗಂಧ, ರಕ್ತ ಚಂದನ ಸೇರಿದಂತೆ ಕಾಡು ಹಾಗೂ ಪ್ರಾಣಿಗಳ ಉತ್ಪನ್ನಗಳನ್ನು ದೋಚುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚಿತ್ರಹಳ್ಳಿ ಠಾಣೆ ಪೊಲೀಸುರು ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳರ ಗ್ಯಾಂಗ್ ನ್ನು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, 6 ಜನ ಅಂತರ್ ರಾಜ್ಯ ಖದೀಮರನ್ನು ಬಂಧಿಸಲಾಗಿದ್ದು, ಅವರಿಂದ 91.300 ಕೆಜಿ ಶ್ರೀಗಂಧ, 15 ಕೆ.ಜಿ. 500 ಗ್ರಾಂ ರಕ್ತ ಚಂದನ, 25 ಕೆ.ಜಿ. 400 ಗ್ರಾಂ 2 ಆನೆ ದಂತ, 34 ಕೆ.ಜಿ. 100 ಗ್ರಾಂ ಪೆಂಗೋಲಿನ್ ಚಿಪ್ಪು, 1 ಲಕ್ಷ 10 ಸಾವಿರ ನಗದು, 2 ಕಾರು, 9 ಮೊಬೈಲ್ ಸೇರಿದಂತೆ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ರಿಸಿವರ್ ತರಿಕೆರೆ ಮೂಲದ ಚಂದ್ರಶೇಖರ್ ಅಲಿಯಾಸ್ ಬೋಟಿ ಚಂದ್ರ, ಶ್ರೀಗಂಧ ಕಟಾವು ಮಾಡುತ್ತಿದ್ದ ಆಂಧ್ರ ಮೂಲದ ಖಲೀಲ್, ಹೊಸದುರ್ಗ ಮೂಲದ ಪ್ರಶಾಂತ್, ರಂಗಸ್ವಾಮಿ, ಕಡೂರ್ ಮೂಲದ ಪುನಿತ್ ನಾಯ್ಕ್, ರಾಮಾ ನಾಯ್ಕ್ ಎಂಬಾತರನ್ನು ಬಂಧಿಸಲಾಗಿದೆ. ಅಲ್ಲದೇ, ಈ ಖದೀಮರೊಂದಿಗೆ ಇನ್ನಷ್ಟು ಜನ ಇದ್ದರು ಎನ್ನಲಾಗಿದೆ. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ವಾಹನ ತಡೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆ ವೇಳೆ 6 ಜನರನ್ನು ಬಂಧಿಸಿದ್ದಾರೆ.