ಎನ್‌ಐಸಿ ಸಿಬ್ಬಂದಿಯ ಅಧಿಕೃತ ಐಡಿಗೆ ಮಾಲ್ವೇರ್ ನಿಂದ ಕೂಡಿದ ಇಮೇಲ್
ಹೊಸದಿಲ್ಲಿ,ಸೆಪ್ಟೆಂಬರ್19: ಮಾಲ್ವೇರ್ ದಾಳಿಯ ಶಂಕೆಯ ಬಗ್ಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಎನ್‌ಐಸಿ ಸಿಬ್ಬಂದಿಯ ಅಧಿಕೃತ ಐಡಿಗೆ ಇಮೇಲ್ ಯೊಂದು ಬಂದಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಆ ನಿರ್ದಿಷ್ಟ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್ ಹೊಂದಿಸಲಾಗಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎನ್‌ಐಸಿಯ ದೂರಿನ ಮೇರೆಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತನಿಖೆ ನಡೆಸಿ ಮೂಲವನ್ನು ಗುರುತಿಸಿದ್ದಾರೆ ಎಂದು ಅವರು ಹೇಳಿದರು.
ತಮ್ಮ ತನಿಖೆ ಮತ್ತಷ್ಟು ಮುಂದುವರಿಯುತ್ತಿರುವುದರಿಂದ ಮೂಲವನ್ನು ಇನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೇಲ್ನೋಟಕ್ಕೆ ಮೂಲವು ಬೆಂಗಳೂರು ಮೂಲದ ಐಟಿ ಸಂಸ್ಥೆಯನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು. ದೋಷದಿಂದ ಕೂಡಿದ ಮೇಲ್ ಅನ್ನು ಪ್ರಾಕ್ಸಿ ಸರ್ವರ್ ಬಳಸಿ ಯುಎಸ್ ನಿಂದ ಬೆಂಗಳೂರು ಮೂಲದ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ.
ಉನ್ನತ ಕಚೇರಿಗಳನ್ನು ಒಳಗೊಂಡ ವ್ಯಾಪಕವಾದ ಸೈಬರ್ ದಾಳಿ ಕುರಿತು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ನಡೆಯುತ್ತಿರುವ ವರದಿಗಳು ಆಧಾರರಹಿತವಾಗಿವೆ ಮತ್ತು ಪ್ರಸ್ತುತ ತನಿಖೆಯ ಹಂತವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








