ಹೊಸದಿಲ್ಲಿ, ಮೇ 22: ಕೊರೋನಾ ಸಂಕಷ್ಟಕ್ಕೆ ಸಿಲುಕಿ ಕಂಗೆಟ್ಟಿರುವ ದೇಶದ ಅರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ , ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಗೊಳಿಸಿದೆ ಮತ್ತು ರೆಪೋ ದರವನ್ನು ಕೂಡ ಶೇ.3.35ಕ್ಕೆ ಇಳಿಕೆ ಮಾಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತಾ ದಾಸ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ, ಕೊರೋನಾ ಭೀತಿಯ ಕಾರಣದಿಂದ ಜಾರಿಯಲ್ಲಿದ್ದ ಲಾಕ್ಡೌನ್ ನ ಬಳಿಕ ಭಾರತದಲ್ಲಿ ಮಾತ್ರವಲ್ಲ , ಇಡೀ ವಿಶ್ವದಾದ್ಯಂತ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೋ ದರಗಳನ್ನು ಇಳಿಸಿರುವುದಾಗಿ ತಿಳಿಸಿದರು.
ಈ ಮೊದಲು ರೆಪೋ ದರ ಶೇಕಡ 4.4 ರಷ್ಟು ಇತ್ತು. ಈಗ ರೆಪೋ ದರವನ್ನು ಶೇಕಡ 4ಕ್ಕೆ ಇಳಿಕೆ ಮಾಡಲಾಗಿದೆ. ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರಗಳನ್ನು ಕೂಡ ಕಡಿತ ಮಾಡಲಾಗಿದೆ. ರಿವರ್ಸ್ ರೆಪೋ ದರವನ್ನು ಶೇಕಡ 3.35 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡ 15 ರಷ್ಟು ಕಡಿಮೆಯಾಗಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ಬೇಳೆಕಾಳುಗಳ ಬೆಲೆ ಹೆಚ್ಚಳವಾಗಿದ್ದು ಆತಂಕ ಹುಟ್ಟಿಸಿದೆ ಎಂದ ಅವರು ಇದೀಗ ರಿವರ್ಸ್ ರೆಪೋ ದರ ಕಡಿತದಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತಾ ದಾಸ್ ಹೇಳಿದರು.
ಪ್ರಮುಖ ಕೈಗಾರಿಕೆಗಳ ಉತ್ಪಾದನೆ ಕುಸಿತ ಕಂಡಿದ್ದು, ಜಿಡಿಪಿ ನಿರೀಕ್ಷೆಗಿಂತಲೂ ಕೆಳಗೆ ಇಳಿಯಲಿದೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಜಾಗತಿಕ ಅರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಉತ್ಪಾದನಾ ವಲಯ ಭಾರಿ ಕುಸಿತ ಕಂಡಿದೆ. ದಿನಬಳಕೆಯ ವಸ್ತುಗಳ ಉತ್ಪಾದನೆಯಲ್ಲಿ ಶೇಕಡ 33ರಷ್ಟು ಕುಸಿತವಾಗಿದ್ದು, ಎರಡು ತಿಂಗಳಲ್ಲಿ ಆರ್ಥಿಕತೆಯ ಮೇಲೆ ಬಹಳ ದುಷ್ಪರಿಣಾಮವನ್ನು ಉಂಟುಮಾಡಿದೆ ಎಂದು ತಿಳಿಸಿದರು.
ಕಳೆದ 30 ವರ್ಷಗಳಲ್ಲಿ ರಫ್ತು ಪ್ರಮಾಣದಲ್ಲಿ ಭಾರಿ ಕುಸಿತವಾಗಿದ್ದು, ಆಮದು ಪ್ರಮಾಣ ಶೇಕಡ 5.8 ರಷ್ಟು ಇಳಿಕೆಯಾಗಿದೆ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದು, ಕೃಷಿ ಕ್ಷೇತ್ರದ ಬಗ್ಗೆ ಉತ್ತಮವಾದ ನಿರೀಕ್ಷೆಯಿದೆ ಎಂದರು. ವಿದೇಶಿ ವಿನಿಮಯ ಮೌಲ್ಯ 9.2 ಮಿಲಿಯನ್ ಗೆ ಏರಿಕೆಯಾಗಿದೆ. 2021 ರ ಅವಧಿಯಲ್ಲೇ ಈ ಏರಿಕೆಯಾಗಿದ್ದು, ಇದು ಭಾರತಕ್ಕೆ ಸಕಾರಾತ್ಮಕ ಬೆಳವಣಿಗೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತಾ ದಾಸ್ ಹೇಳಿದ್ದಾರೆ
ಸಾಲದ ಮೇಲಿನ ಕಂತು ಪಾವತಿ ದಿನಾಂಕವನ್ನು ಜೂನ್.1ರಿಂದ ಆಗಸ್ಟ್.30ರವರೆಗೂ ಮುಂದೂಡಿಕೆ ಮಾಡಲಾಗಿದ್ದು, ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲದ ಕಂತು ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ ಮತ್ತು ಗೃಹ, ವಾಹನ, ವೈಯಕ್ತಿಕ ಸಾಲದ ಬಡ್ಡಿ ದರಗಳನ್ನು ಕಡಿತ ಮಾಡಲಾಗಿದೆ. ಮುಂದಿನ ಮೂರು ತಿಂಗಳವರೆಗೂ ಎಲ್ಲ ರೀತಿಯ ಸಾಲಗಳ ಇಎಂಐ ಕಟ್ಟಲು ವಿನಾಯಿತಿ ನೀಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.








