
ಹೊಸದಿಲ್ಲಿ, ಜೂನ್ 1: ದೆಹಲಿ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಕೇಂದ್ರ ಸರ್ಕಾರದಿಂದ ಐದು ಸಾವಿರ ಕೋಟಿ ರೂಪಾಯಿಗಳ ನೆರವು ಕೋರಿದೆ.
ಕೊರೋನಾ ಬಿಕ್ಕಟ್ಟಿನಿಂದಾಗಿ ದೆಹಲಿ ಸರ್ಕಾರದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು, ಸರ್ಕಾರದ ತೆರಿಗೆ ಸಂಗ್ರಹವು ಸುಮಾರು 85% ನಷ್ಟು ಕಡಿಮೆಯಾಗಿದೆ. ನಾವು ಸರ್ಕಾರದ ಹಣಕಾಸು ಮತ್ತು ಕನಿಷ್ಠ ವೆಚ್ಚಗಳ ಬಗ್ಗೆ ಅಧ್ಯಯನ ಮಾಡಿದ್ದು, ಕೇವಲ ಸಂಬಳ ಪಾವತಿಸಲು ಮತ್ತು ಅಗತ್ಯ ವೆಚ್ಚಗಳನ್ನು ಭರಿಸಲು ಸರ್ಕಾರಕ್ಕೆ ಪ್ರತಿ ತಿಂಗಳು 3,500 ಕೋಟಿ ರೂಪಾಯಿ ಬೇಕು. ಕಳೆದ ಎರಡು ತಿಂಗಳಿನಿಂದ ಜಿಎಸ್ಟಿ ಸಂಗ್ರಹ ತಲಾ ₹ 500 ಕೋಟಿ ಆಗಿದ್ದು ಎಲ್ಲಾ ಮೂಲಗಳು ಸೇರಿ ಎರಡು ತಿಂಗಳಲ್ಲಿ ಸರಿಸುಮಾರು 1,700 ಕೋಟಿ ರೂ. ಪಡೆದಿವೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ನೇತೃತ್ವದ ದೆಹಲಿ ಸರ್ಕಾರವು ಮಾರ್ಚ್ ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟುಗಳನ್ನು ತೆರೆಯಲು ನಿರ್ಬಂಧಗಳನ್ನು ಸಡಿಲಿಸಿ ಪ್ರಯತ್ನಿಸುತ್ತಿದ್ದು, ಆದಾಯ ಕುಸಿದು ಹೋಗಿದೆ ಎಂದು ಅವರು ಹೇಳಿದರು.
ದೆಹಲಿ ಸರ್ಕಾರದ ಮುಂದಿರುವ ಪ್ರಶ್ನೆ ಅದರ ಉದ್ಯೋಗಿಗಳಿಗೆ ಹೇಗೆ ಸಂಬಳವನ್ನು ಕೊಡುವುದೆಂದು ಎಂದು ಹೇಳಿದ ಮನೀಶ್ ಸಿಸೋಡಿಯಾ, ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರತಿಯೊಬ್ಬರಿಗೂ ಸಂಬಳವನ್ನು ನೀಡುವಂತೆ ಕೇಂದ್ರದಿಂದ ಸಹಾಯವನ್ನು ಕೇಳಿದ್ದೇನೆ ಎಂದು ಹೇಳಿದರು.
ಹಣಕಾಸು ಖಾತೆಯನ್ನು ಹೊಂದಿರುವ ಮನೀಶ್ ಸಿಸೋಡಿಯಾ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಸಹಾಯಕ್ಕಾಗಿ ಪತ್ರ ಬರೆದಿದ್ದು, ನಮಗೆ ಸಂಬಳ ಭರಿಸಲು ಎರಡು ತಿಂಗಳವರೆಗೆ 7,000 ಕೋಟಿ ರುಪಾಯಿ ಬೇಕಾಗುತ್ತದೆ. ಆದ್ದರಿಂದ ದೆಹಲಿ ಸರ್ಕಾರಕ್ಕೆ 5,000 ಕೋಟಿ ರುಪಾಯಿಗಳನ್ನು ಮಂಜೂರು ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಆನ್ ಲೈನ್ ನಲ್ಲಿ ಪ್ರಸಾರವಾದ ಪತ್ರಿಕಾಗೋಷ್ಠಿಯಲ್ಲಿ ಸಿಸೋಡಿಯಾ ಹೇಳಿದರು.








