ವಿಜಯನಗರ: ರಾಜ್ಯ ಸರಕಾರವು ಶೀಘ್ರವೇ ಲವ್ ಜಿಹಾದ್ ವಿರುದ್ಧ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಮಹಿಳೆಯರಿಗೆ ರಕ್ಷಣೆ ಒದಗಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಕಟೀಲ್, ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ನುಡಿದಂತೆ ನಡೆಯುತ್ತಿದೆ. ಈಗಾಗಲೇ ಅದು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಮಹಿಳೆಯರಿಗೆ ಅನ್ಯಾಯ ಆಗುವುದನ್ನು ತಡೆಯುವಂತೆ ಕೋರ್ಟ್ ನೀಡಿದ್ದ ತೀರ್ಪನ್ನೇ ಅನುಷ್ಠಾನಗೊಳಿಸಲಿಲ್ಲ. ಮಹಿಳೆಗೆ ಎಲ್ಲೇ ಅನ್ಯಾಯವಾದರೂ ಅದನ್ನು ತಡೆಯಬೇಕು ಎಂಬ ಚಿಂತನೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರವು ತ್ರಿವಳಿ ತಲಾಖ್ ರದ್ದು ಮಾಡುವ ಮಹತ್ವದ ನಿರ್ಧಾರ ಮಾಡಿದೆ.
ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸಿದ ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ನೀತಿ ತನ್ನದಾಗಿಸಿಕೊಂಡಿತ್ತು. ಅಲ್ಪಸಂಖ್ಯಾತ-ಬಹುಸಂಖ್ಯಾತರ ವಿಭಜನೆ, ಗೋಹತ್ಯಾ ನಿಷೇಧದ ವಿರೋಧ, ರಾಮಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿತು. 370ನೇ ವಿಧಿ ರದ್ದತಿಯನ್ನೂ ವಿರೋಧಿಸಿತು. ಇದೆಲ್ಲಾ ಕಾರಣಕ್ಕಾಗಿ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿ, ಜನಪರ- ರಾಷ್ಟ್ರವಾದದ ಪಕ್ಷವಾದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಎಂದು ಕಟೀಲ್ ತಿಳಿಸಿದರು.
ಮಹಿಳಾ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪುರಂದೇಶ್ವರಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ಸೇರಿ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮಕ್ಕೂ ಮೊದಲು ಮೊದಲು ಬೈಕ್ ರ್ಯಾಲಿ ನಡೆಯಿತು. ಕೊರೊನಾ ವಾರಿಯರ್ಸ್‍ಗಳಿವೆ ಗೌರವಿಸಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel