Aus vs Eng : ಇಂಗ್ಲೆಂಡ್ ತಂಡಕ್ಕೆ ಸೋಲಿನ ಆಘಾತ..!!
ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಬಾರಿಗೆ T20 ವಿಶ್ವಕಪ್ ಗೆದ್ದು ಸಂಭ್ರಮದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಸೋಲಿನ ಆಘಾತ ಎದುರಿಸಿದೆ. ಅಡಿಲೇಡ್ ಓವಲ್ ನಲ್ಲಿ ನಡೆದ ಆಂಗ್ಲರ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂಗಳು 6 ವಿಕೆಟ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ೧-೦ ಅಂತರದಿಂದ ಮುನ್ನಡೆ ಸಾಧಿಸಿದೆ. ಹಾಗೆಯೇ, ನೂತನ ನಾಯಕ ಪ್ಯಾಟ್ ಕೆಮಿನ್ಸ್ ಮೊದಲ ಪಂದ್ಯದಲ್ಲೇ ಗೆಲುವಿನ ನಗೆ ಬೀರಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜಾಸನ್ ರಾಯ್ 6, ಫಿಲ್ ಸಾಲ್ಟ್ 14, ಜೇಮ್ಸ್ ವಿನ್ಸ್ 5, ಸ್ಯಾಮ್ ಬಿಲ್ಲಿಂಗ್ಸ್ 17 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. 23.1 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 118 ರನ್ಗಳಿಗೆ ಕುಸಿತಗೊಂಡಿತ್ತು. ಈ ವೇಳೆ ನೆಲಕಚ್ಚಿ ಆಡಿದ ಡೇವಿಡ್ ಮಲಾನ್, ಪಂದ್ಯದ ಗತಿಯನ್ನೇ ಬದಲಾಯಿಸಿದರು.
ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವ ಆಸೀಸ್, ಲೆಕ್ಕಾಚಾರವನ್ನು ಉಲ್ಟಾ ಮಾಡಿದರು. ಐದನೇ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದು ಮಲನ್, ಕೊನೆಯವರೆಗೂ ಬ್ಯಾಟ್ ಬೀಸಿದರು. 64 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ ಅವರು, 107 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟು 128 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳ ನೆರವಿನಿಂದ 134 ರನ್ ಗಳಿಸಿ ಆಡಮ್ ಝಂಪಾ ಅವರಿಗೆ ವಿಕೆಟ್ ಒಪ್ಪಿಸಿದರು. 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು.
ಸವಾಲಿನ ಗುರಿ ಚೇಸ್ ಮಾಡಿದ್ದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಜೋಡಿ, ಮೊದಲ ವಿಕೆಟ್ ಜೊತೆಯಾಟಕ್ಕೆ 147 ರನ್ ಗಳಿಸಿತು. ತಂಡದ ಗೆಲುವನ್ನು ಖಚಿತಗೊಳಿಸಿದರು. ಟ್ರಾವಿಸ್ ಹೆಡ್ 57 ಎಸೆತಗಳಲ್ಲಿ 69 ರನ್ ಗಳಿಸಿದ್ದಾಗ ಜೋರ್ಡಾನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಡೇವಿಡ್ ವಾರ್ನರ್ 84 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 86 ರನ್ ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್ 78 ಎಸೆತಗಳಲ್ಲಿ 80 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಗೆಲುವು ಸಾಧಿಸಿತು.