ನಂಬಲು ಅಸಾಧ್ಯವಾಗಿರುವ ಆಟಗಾರ ಅಂದ್ರೆ ಅದು ಬೆನ್ ಸ್ಟೋಕ್ಸ್…!
ಆತನ ಒಂದು ಅದ್ಭುತ ಶತಕ… ಮತ್ತೊಂದು ಮಿಂಚಿನ ಅರ್ಧಶತಕ… ಪಂದ್ಯದಲ್ಲಿ ಗಳಿಸಿದ್ದ ಒಟ್ಟು ರನ್ 254… ಕಬಳಿಸಿದ್ದ ವಿಕೆಟ್‍ಗಳು ಮೂರು. ಇಷ್ಟು ಸಾಕಾಗಿತ್ತು… ಎದುರಾಳಿ ತಂಡದ ಸೋಲಿಗೆ ಮುನ್ನಡಿ ಬರೆಯಲು. ಈತ ಒಬ್ಬ ನಂಬಲು ಅಸಾಧ್ಯವಾಗಿರುವ ಕ್ರಿಕೆಟಿಗ. ನಾಯಕನಾಗಿ ಸೋಲು ಕಂಡಿದ್ದ. ಆದ್ರೆ ಆಟಗಾರನಾಗಿ ತಂಡದ ಗೆಲುವಿಗೆ ಕಾರಣವಾದ.
ಹೌದು, ಬೆನ್ ಸ್ಟೋಕ್ಸ್.. ಇಂಗ್ಲೆಂಡ್ ಕ್ರಿಕೆಟ್ ತಂಡದ ಅಪತ್ಬಾಂಧವ. ವಿಶ್ವ ಕ್ರಿಕೆಟ್ ನ ಶ್ರೇಷ್ಠ ಆಲ್ ರೌಂಡ್. ಅದ್ರಲ್ಲೂ ಸದ್ಯದ ವಿಶ್ವ ಕ್ರಿಕೆಟ್ ನ ಶ್ರೇಷ್ಠ ಆಲ್ ರೌಂಡ್ ಯಾರು ಅಂದಾಗ ಮೊದಲು ಕೇಳಿಬರುತ್ತಿರುವ ಹೆಸರೇ ಬೆನ್ ಸ್ಟೋಕ್ಸ್.. ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಸ್ಟೋಕ್ಸ್ ಕಂಡು ಕೊಂಡಿರುವ ಮಾರ್ಗ ಸಿಗರೇಟ್. ಕಳೆದ ವಿಶ್ವಕಪ್ ಫೈನಲ್ ಪಂದ್ಯದ ಸೂಪರ್ ಓವರ್‍ಗೆ ಮುನ್ನ ಬಾತ್ ರೂಂಗೆ ಹೊಗಿ ಸಿಗರೇಟ್ ಸೇದಿ ಆಮೇಲೆ ಬ್ಯಾಟಿಂಗ್ ಮಾಡಿದ್ದ. ಹಾಗಂತ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲೂ ಹಾಗೇ ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ.
ಅದು ಏನೇ ಇರಲಿ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಜಯ ದಕ್ಕಿಸಿಕೊಡುವಲ್ಲಿ ಬೆನ್ ಸ್ಟೋಕ್ಸ್ ಪ್ರಮುಖ ಪಾತ್ರ ವಹಿಸಿದ್ದ. ಈ ಪಂದ್ಯದಲ್ಲಿ ಇಂಗ್ಲೆಂಡ್‍ಗೆ ಗೆಲುವು ಅನಿವಾರ್ಯವಾಗಿತ್ತು. ಆದ್ರೆ ಮಳೆಯಿಂದಾಗಿ ಪಂದ್ಯ ಎಲ್ಲಿ ಕೈತಪ್ಪಿ ಹೋಗುತ್ತೆ ಅನ್ನೋ ಆತಂಕ ಇಂಗ್ಲೆಂಡ್ ತಂಡಕ್ಕಿತ್ತು.
ಆದ್ರೆ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಬೆನ್ ಸ್ಟೋಕ್ಸ್ ಅದ್ಭುತವಾಗಿಯೇ ಆಡಿದ್ದ. ಡಾಮಿನಿಕ್ ಜೊತೆ ಅಮೋಘ ದ್ವಿಶತಕದ ಜೊತೆಯಾಟವನ್ನೂ ಆಡಿದ್ದ. ಅಲ್ಲದೆ ವೈಯಕ್ತಿಕವಾಗಿ 176 ರನ್ ದಾಖಲಿಸಿ ಇಂಗ್ಲೆಂಡ್ ತಂಡದ ಬೃಹತ್ ಮೊತ್ತಕ್ಕೂ ಕಾರಣೀಕರ್ತನಾಗಿದ್ದ. ಹಾಗೇ
ಮೊದಲ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ಕೂಡ ಕಬಳಿಸಿದ್ದ.
ಇನ್ನು ಎರಡನೇ ಇನಿಂಗ್ಸ್.. ಆರಂಭಿಕನಾಗಿ ಬಡ್ತಿ ಪಡೆದಿದ್ದ ಸ್ಟೋಕ್ಸ್ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಮಿಂಚಿನ ವೇಗದಲ್ಲಿ ಬ್ಯಾಟ್ ಬೀಸಿ ವಿಂಡೀಸ್ ತಂಡಕ್ಕೆ ಒತ್ತಡ ಹೇರುವ ತಂತ್ರದಲ್ಲೂ ಸಫಲನಾದ. 57 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‍ಗಳನ್ನು ಸಿಡಿಸಿ ಅಜೇಯ 78 ರನ್ ದಾಖಲಿಸಿದ್ದ. ಇನ್ನು ಬೌಲಿಂಗ್ ನಲ್ಲೂ ಅಷ್ಟೇ. ಎರಡು ವಿಕೆಟ್ ಉರುಳಿಸಿ ವಿಂಡೀಸ್ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದ. ಒಬ್ಬ ಬೆನ್ ಸ್ಟೋಕ್ಸ್ ನಿಂದಾಗಿ ಕೆರೆಬಿಯನ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು.
ಸಹಜವಾಗಿ ಬೆನ್ ಸ್ಟೋಕ್ಸ್ ಆಟ ಇಂಗ್ಲೆಂಡ್ ತಂಡದ ನಾಯಕ ಜಾಯ್ ರೂಟ್ ಅವರ ಮೆಚ್ಚುಗೆಗೆ ಪಾತ್ರವಾಯಿತ್ತು. ಪಂದ್ಯದ ಬಳಿಕ ಜಾಯ್ ರೂಟ್ ಬೆನ್ಸ್ ಸ್ಟೋಕ್ಸ್ ಆಟವನ್ನು ಮನಸಾರೆ ಹೊಗಳಿಸಿದ್ರು. ಬೆನ್ ಸ್ಟೋಕ್ಸ್… ನಂಬಲು ಅಸಾಧ್ಯವಾದ ಆಟಗಾರ. ಆತ ಹೀಗೆ ಪ್ರದರ್ಶನವನ್ನು ನೀಡುತ್ತಿದ್ರೆ, ಆತನಿಗೆ ಆಕಾಶಕ್ಕೇರುವುದಕ್ಕೂ ಇತಿಮಿತಿಗಳಿರುವುದಿಲ್ಲ. ಆತನ ಆಟದ ಗುಣಮಟ್ಟ ಆ ಮಟ್ಟದಲ್ಲಿದೆ ಎಂದು ಜಾಯ್ ರೂಟ್ ಹೇಳಿದ್ದಾರೆ.
ಪಂದ್ಯದ ಸ್ಥಿತಿಗತಿಯನ್ನು ಅರಿತುಕೊಂಡು ಬ್ಯಾಟಿಂಗ್ ಮಾಡುವ ಬೆನ್ ಸ್ಟೋಕ್ಸ್ ನ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ಕಳೆದ ಒಂದು ವರ್ಷದಿಂದ ಆತ ಸ್ಥಿರ ಪ್ರದರ್ಶನ ನೀಡುತ್ತಿದ್ದಾನೆ. ಈ ಪಂದ್ಯದಲ್ಲೂ ಅಷ್ಟೇ.. ಆತ ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿದ್ದ. ಮೊದಲ ಇನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ತಂಡದ ಗೆಲುವಿನ ಆಸೆಯನ್ನು ಇಮ್ಮಡಿಗೊಳಿಸಿದ್ದ. ಹಾಗೇ ಬೌಲಿಂಗ್‍ನಲ್ಲೂ.. ಹೀಗೆ ಆಲ್ ರೌಂಡ್ ಪ್ರದರ್ಶನದಿಂದಾಗಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಆಸ್ತಿಯಾಗುತ್ತಿದ್ದಾನೆ.







