ವೆಸ್ಟ್ ಇಂಡೀಸ್ ಹೀನಾಯವಾಗಿ ಸೋತ್ರು…ಇಂಗ್ಲೆಂಡ್ ಭರ್ಜರಿಯಾಗಿ ಜಯ ಸಾಧಿಸಿದ್ರು…!
ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ಅವರ ಮಾರಕ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದೆ. ಗೆಲ್ಲಲು 399 ರನ್‍ಗಳ ಸವಾಲನ್ನು ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ಪಂದ್ಯದ ಅಂತಿಮ ದಿನ 129 ರನ್‍ಗಳಿಗೆ ಸರ್ವಪತನಗೊಂಡಿತ್ತು. ಈ ಮೂಲಕ ಇಂಗ್ಲೆಂಡ್ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.
ಹಾಗೇ ನೋಡಿದ್ರೆ ವೆಸ್ಟ್ ಇಂಡೀಸ್ ತಂಡದ ಸೋಲು ಮೂರನೇ ದಿನವೇ ಖಚಿತವಾಗಿತ್ತು. ಆದ್ರೆ ನಾಲ್ಕನೇ ದಿನದ ಆಟ ಮಳೆಗೆ ಆಹುತಿಯಾಯ್ತು. 10 ರನ್‍ಗೆ ಎರಡು ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ಅವರು ಮಾರಕವಾಗಿ ಕಾಡಿದ್ರು. ಅಲ್ಲದೆ ಸ್ಟುವರ್ಟ್ ಬ್ರಾಡ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾದ್ರು.
ಬ್ಯಾಟಿಂಗ್ ನಲ್ಲೂ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದ ಸ್ಟುವರ್ಟ್ ಬ್ರಾಡ್ ಅವರು 36 ರನ್‍ಗೆ 4 ವಿಕೆಟ್ ಉರುಳಿಸಿದ್ರು. ಇನ್ನೊಂದೆಡೆ ಕ್ರಿಸ್ ವೋಕ್ಸ್ 50 ರನ್‍ಗೆ ಐದು ವಿಕೆಟ್ ಕಬಳಿಸಿದ್ರು. ಸ್ಥಿರ ಪ್ರದರ್ಶನ ನೀಡಲು ವಿಫಲರಾದ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮೆನ್‍ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ್ರು.
ಕಡೆಯ ದಿನ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳಲು ವೆಸ್ಟ್ ಇಂಡೀಸ್ ಹೋರಾಟಕ್ಕೆ ಇಂಗ್ಲೆಂಡ್ ವೇಗಿಗಳು ಅಡ್ಡಿಯನ್ನುಂಟು ಮಾಡಿದ್ರು. ನಾಲ್ಕನೇ ದಿನ ಸೋಲಿನಿಂದ ಬಚಾವ್ ಮಾಡಿದ್ದ ಮಳೆರಾಯ ಕೂಡ ಐದನೇ ದಿನ ಕೆರೆಬಿಯನ್ನರಿಗೆ ನೆರವು ನೀಡಲಿಲ್ಲ. ಒಟ್ಟಾರೆ, ವೆಸ್ಟ್ ಇಂಡೀಸ್ ತಂಡಕ್ಕೆ ಭರ್ಜರಿಯಾಗಿ ಗೆಲ್ಲಲು ಗೊತ್ತು.. ಹೀನಾಯವಾಗಿ ಸೋಲುವುದೂ ಗೊತ್ತು ಎಂಬುದು ಮತ್ತೆ ಸಾಬೀತಾಯ್ತು.
ಕೋವಿಡ್-19 ನಿಂದ ಮತ್ತೆ ಶುರುವಾದ ಟೆಸ್ಟ್ ಸರಣಿ ಯಾವುದೇ ಅಡೆತಡೆ ಇಲ್ಲದೆ ಸಮಾಪ್ತಿಯಾಯ್ತು. ಜೋಫ್ರಾ ಆರ್ಚರ್ ಅವರ ಶಿಷ್ಟಚಾರ ಉಲ್ಲಂಘನೆಯೊಂದನ್ನು ಬಿಟ್ರೆ ಬೇರೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಆಲ್ ರೌಂಡರ್ ಪ್ರದರ್ಶನ ನೀಡಿದ ಸ್ಟುವರ್ಟ್ ಬ್ರಾಡ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಹಾಗೇ ರೋಸ್ಟನ್ ಚೇಸ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.
ಇಂಗ್ಲೆಂಡ್ ಮೊದಲ ಇನಿಂಗ್ಸ್ – 369 ಮತ್ತು ಎರಡನೇ ಇನಿಂಗ್ಸ್ 2 ವಿಕೆಟ್‍ಗೆ 226ಕ್ಕೆ ಡಿಕ್ಲೇರ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ – 197, ಎರಡನೇ ಇನಿಂಗ್ಸ್ 129 ಆಲೌಟ್
ಇಂಗ್ಲೆಂಡ್‍ಗೆ 269 ರನ್‍ಗಳ ಭರ್ಜರಿ ಜಯ








