ಇಂಗ್ಲೆಂಡ್ -ವೆಸ್ಟ್ ಇಂಡೀಸ್ ಮೂರನೇ ಟೆಸ್ಟ್ – ಸರಣಿ ಗೆಲ್ಲುವ ತವಕದಲ್ಲಿ ಉಭಯ ತಂಡಗಳು
ವೆಸ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ (ಜುಲೈ 24ರಿಂ) ಆರಂಭವಾಗಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೇ 1-1ರಿಂದ ಸಮಬಲಗೊಂಡಿದೆ. ಹೀಗಾಗಿ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಉಮೇದಿನಲ್ಲಿದೆ. ಒಂದು ವೇಳೆ ವೆಸ್ಟ್ ಇಂಡೀಸ್ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡ್ರೆ, 32 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಹಿರಿಮೆಗೆ ಪಾತ್ರವಾಗಲಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಎರಡನೇ ಟೆಸ್ಟ್ ಪಂದ್ಯದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಸೋಲಿನ ಆಘಾತದಿಂದ ಹೊರಬಂದಿದೆ. ನಾಯಕನಾಗಿ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ವಿಫಲರಾಗಿದ್ದ ಬೆನ್ ಸ್ಟೋಕ್ಸ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಆಲ್‍ರೌಂಡರ್ ಆಟಗಾರನಾಗಿ ತಂಡಕ್ಕೆ ಮಹತ್ವದ ಗೆಲುವು ದಕ್ಕಿಸಿಕೊಟ್ಟಿದ್ದರು. ಅಲ್ಲದೆ ಸರಣಿ ಸೋಲಿನ ಭೀತಿಯನ್ನು ಅಳಿಸಿ ಹಾಕಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ ಜಾಯ್ ರೂಟ್ ಪಡೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಕೆಲವೊಂದು ಬದಲಾವಣೆಗಳು ಆಗಬಹುದು. ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೇಮ್ಸ್ ಆಂಡರ್ಸನ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೋವಿಡ್ ಶಿಷ್ಟಚಾರ ಉಲ್ಲಂಘನೆಯ ಆರೋಪದಡಿಯಲ್ಲಿ ಆರ್ಚರ್ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಇಂಗ್ಲೆಂಡ್ ಸಂಭವನೀಯ ತಂಡ – ಜಾಯ್ ರೂಟ್ (ನಾಯಕ), ರೋರಿ ಬನ್ರ್ಸ್, ಡಾಮ್ ಸಿಬ್ಲೇಯ್, ಝಾಕ್ ಕ್ರಾವ್ಲೇ, ಬೆನ್ ಸ್ಟೋಕ್ಸ್, ಒಲಿವ್ ಪೊಪ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್.
ವೆಸ್ಟ್ ಇಂಡೀಸ್ ಸಂಭವನೀಯ ತಂಡ – ಜೇಸನ್ ಹೋಲ್ಡರ್ (ನಾಯಕ), ಜಾನ್ ಕ್ಯಾಂಬೆಲ್, ಕ್ರೇಗ್ ಬ್ರಾತ್ ವೇಟ್, ಶಾಹಿ ಹೋಪ್, ಶಾಮ್ರಾಹ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮನ್ ಬ್ಲಾಕ್ ವುಡ್, ಶಾನ್ ಡಾವ್ರಿಚ್, ಚೇಮರ್ ಹೋಲ್ಡರ್, ಕೇಮರ್ ರಾಚ್, ಶಾನೊನ್ ಗ್ಯಾಬ್ರಿಯಲ್.








