ಜೀವನವನ್ನು ಪೂರ್ತಿಯಾಗಿ ಅನುಭವಿಸಿ. ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ – ಪ್ರಧಾನಿ ಮೋದಿ
ಹೊಸದಿಲ್ಲಿ, ಜುಲೈ 15: 10 ಮತ್ತು 12 ನೇ ತರಗತಿಯ ಸಿಬಿಎಸ್‌ಇ ಮಂಡಳಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ ಮತ್ತು ಫಲಿತಾಂಶದಿಂದ ಅಸಂತುಷ್ಟರಾದ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆಯು ನೀವು ಯಾರೆಂದು ವ್ಯಾಖ್ಯಾನಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ಟ್ವಿಟರ್ ನಲ್ಲಿ
“ತಮ್ಮ ಹತ್ತನೇ ತರಗತಿ ಮತ್ತು ಹನ್ನೆರಡನೇ ಸಿಬಿಎಸ್ಇ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ನನ್ನ ಎಲ್ಲ ಯುವ ಗೆಳೆಯರಿಗೆ ಅಭಿನಂದನೆಗಳು. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಫಲಿತಾಂಶದಿಂದ ಅಸಂತುಷ್ಟರಾದ ವಿದ್ಯಾರ್ಥಿಗಳಿಗೆ “ಒಂದು ಪರೀಕ್ಷೆಯು ನೀವು ಯಾರೆಂದು ವ್ಯಾಖ್ಯಾನಿಸುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ಪ್ರತಿಯೊಬ್ಬರೂ ಹಲವಾರು ಪ್ರತಿಭೆಗಳಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ಜೀವನವನ್ನು ಪೂರ್ತಿಯಾಗಿ ಅನುಭವಿಸಿ. ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬೇಡಿ, ಯಾವಾಗಲೂ ಮುಂದೆ ನೋಡಿ. ನೀವು ಅದ್ಭುತಗಳನ್ನು ಮಾಡುತ್ತೀರಿ” ಎಂದು ಭರವಸೆ ತುಂಬಿದ್ದಾರೆ.
12 ನೇ ತರಗತಿಯಲ್ಲಿ ಕಳೆದ ವರ್ಷ ಶೇಕಡಾ 83.40 ಉತ್ತೀರ್ಣರಾಗಿದ್ದರೆ, ಈ ವರ್ಷ ಶೇಕಡಾ 88.78 ಫಲಿತಾಂಶ ದಾಖಲಾಗಿದೆ. ಇಂದು ಘೋಷಿಸಿದ 10 ನೇ ತರಗತಿ ಫಲಿತಾಂಶಗಳಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇಕಡಾ 0.36 ರಷ್ಟು ಅಲ್ಪ ಏರಿಕೆ ಕಂಡುಬಂದಿದೆ.








