ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ನಾನೇ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿರುವ ಮಹಿಳಾ ನಾಯಕಿಯೊಬ್ಬರ ಪ್ರವೇಶವಾಗಿದೆ.
ಜೆಡಿಯು ನಾಯಕ ಬಿನೋದ್ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಚೌಧರಿ ‘ನಾನೇ ಮುಖ್ಯಮಂತ್ರಿ’ ಎಂದು ಘೋಷಿಸಿಕೊಳ್ಳುವುದರ ಜೊತೆಗೆ ‘ಪೂರಲ್ಸ್’ ಎಂಬ ಹೊಸ ರಾಜಕೀಯ ಪಕ್ಷದ ಸ್ಥಾಪನೆಯ ಘೋಷಣೆಯನ್ನು ಮಾಡಿದ್ದಾರೆ.
ಬಿಹಾರದ ಪ್ರಮುಖ ದಿನಪತ್ರಿಕೆಗಳಲ್ಲಿ ‘ಪೂರಲ್ಸ್’ ಎಂಬ ಹೊಸ ಪಕ್ಷದ ಜಾಹಿರಾತು ಪ್ರಕಟಿಸಿದ್ದು, ಬಿಹಾರಕ್ಕೆ ಬದಲಾವಣೆ, ಶಾಂತಿ ಬೇಕಾಗಿದೆ. ಅದಕ್ಕಾಗಿ ನಮ್ಮ ಪಕ್ಷವನ್ನು ಸೇರಿಕೊಳ್ಳಿ. ಬಿಜೆಪಿ-ಎಲ್‌ಜೆಪಿ-ಜೆಡಿಯುನಿಂದ ರಾಜ್ಯವನ್ನು ಬಿಡಿಸಲು ಬೆಂಬಲ ಕೊಡಿ ಎಂದು ಸದ್ಯ ಲಂಡನ್‌ನಲ್ಲಿರುವ ಪುಷ್ಪಂ ಪ್ರಿಯಾ ಚೌಧರಿ ಕೇಳಿಕೊಂಡಿದ್ದಾರೆ.
2025ರೊಳಗೆ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ಭರವಸೆಯನ್ನು ನೀಡಲಾಗಿದೆ.
ತಮ್ಮ ಪುತ್ರಿಯ ಹೊಸ ಪಕ್ಷದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿನೋದ್ ಚೌಧರಿ ಜೆಡಿಯು ಅವರಿಗೆ ಬೆಂಬಲ ನೀಡುವುದಿಲ್ಲ. ಪುತ್ರಿಯ ನಿರ್ಧಾರದ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವಳು ಪಕ್ಷದ ನಾಯಕತ್ವಕ್ಕೆ ಸವಾಲು ಹಾಕುತ್ತಿದ್ದಾಳೆ ಎಂದಿದ್ದಾರೆ.