ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಹಕ್ಕು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹೊಸದಿಲ್ಲಿ, ಅಗಸ್ಟ್ 11: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ 2005 ರ ತಿದ್ದುಪಡಿಗೆ ಅನುಗುಣವಾಗಿ ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯ ಮೇಲೆ ಸಮಾನ ಹಕ್ಕಿದೆ ಎಂದು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.

ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ರ ಜಾರಿಗೆ ಬರುವ ಮೊದಲು ತಂದೆ ಮೃತಪಟ್ಟಿದ್ದರೂ ಸಹ ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯ ಮೇಲೆ ಹಕ್ಕಿದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ಪೀಠ ಹೇಳಿದೆ.
ಪೋಷಕರ ಆಸ್ತಿಯ ಮೇಲೆ ಹೆಣ್ಣುಮಕ್ಕಳಿಗೆ ಮತ್ತು ಪುತ್ರರಿಗೆ ಸಮಾನ ಹಕ್ಕುಗಳ ಮಹತ್ವವನ್ನು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್ ತನ್ನ ತಂದೆ ಜೀವಂತವಾಗಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಜೀವನದುದ್ದಕ್ಕೂ ಸಹವರ್ತಿಗಳಾಗಿ ಉಳಿಯುತ್ತಾರೆ ಎಂದು ಹೇಳಿದೆ. ಹೆಣ್ಣುಮಕ್ಕಳಿಗೆ ಪುತ್ರರಂತೆ ಸಮಾನ ಹಕ್ಕುಗಳನ್ನು ನೀಡಬೇಕು, ಮಗಳು ಜೀವನದುದ್ದಕ್ಕೂ ಹೆತ್ತವರ ಪ್ರೀತಿಯ ಮಗಳಾಗಿರುತ್ತಾಳೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.








