ದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಹೈಅಲರ್ಟ್ ಆಗಿವೆ. ಈ ಮಧ್ಯೆ ಕೊರೊನಾ ವೈರಸ್‌ನಿಂದ ಜನರನ್ನು ಕಾಪಾಡಲು ಗೋವಿನ ಮೂತ್ರ ಹಾಗೂ ಸಗಣಿಯು ನೆರವಾಗುತ್ತದೆ ಎಂದು ಹಿಂದೂ ಮಹಾಸಭಾದ ಅಧ್ಯಕ್ಷ ಚಕ್ರಪಾಣಿ ಹೇಳಿದ್ದು, ನಿನ್ನೆ ದೆಹಲಿಯಲ್ಲಿ ಗೋಮೂತ್ರ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಸರಿಸುಮಾರು 200 ಕ್ಕೂ ಹೆಚ್ಚು ಮಂದಿ ಗೋಮೂತ್ರ ಕುಡಿದು, ಜೈಕಾರ ಕೂಗಿದ್ದಾರೆ.
ಅಲ್ಲದೆ ತಮಗೆ ಕೊರೊನಾ ವೈರಸ್ ನಿಂದ ಬಚಾವಾಗಲು ಯಾವುದೇ ರೀತಿಯ ಇಂಗ್ಲಿಷ್ ಮೆಡಿಸಿನ್‌ನ ಅಗತ್ಯವಿಲ್ಲ, ಕಳೆದ 21 ವರ್ಷದಿಂದ ಗೋಮೂತ್ರವನ್ನು ಸೇವಿಸುತ್ತಾ ಬಂದಿದ್ದೇನೆ, ಮೇಲಾಗಿ ಸಗಣಿಯಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಹಾಗಾಗಿ ನನಗೆ ಎಂದಿಗೂ ಇಂಗ್ಲಿಷ್ ಮೆಡಿಸಿನ್ ನ ಅವಶ್ಯಕತೆ ಬಿದ್ದಿಲ್ಲ ಎಂದು ಈ ಗೋಮೂತ್ರ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಓಂ ಪ್ರಕಾಶ್ ಎಂಬುವವರು ಹೇಳಿದ್ದಾರೆ.
ಇನ್ನು ಈ ಗೋಮೂತ್ರ ಪಾರ್ಟಿಯಲ್ಲಿ ಮಹಿಳೆಯರು ಭಾಗವಹಿಸಿ ಗೋಮೂರ್ತವನ್ನು ಕುಡಿದಿದ್ದು, ದೇಶದ ಇತರೆಡೆಗೂ ಆಚರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.









