ಶಿವಮೊಗ್ಗ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆಯಿಂದಾಗಿ ಹನಿಯಾದ ಜಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ತೀರ್ಥಹಳ್ಳಿ ತಾಲ್ಲೂಕಿನಾಧ್ಯಂತ ಭೇಟಿ ನೀಡಿದ್ದಾರೆ. ಹಗಲತ್ತಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು ಕಳೆದ ಬಾರಿ ಗುಡ್ಡ ಕುಸಿದಿಂದಾಗಿ ಹಾನಿಗೊಳಗಾದ ರೈತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಂ.ಶಿವಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ ಹಾಗೂ ಜಿಪಂ ಸಿಇಒ ವೈಶಾಲಿಯವರಿಗೆ ಸೂಚನೆ ನೀಡಿದ್ದಾರೆ.
ಹೆಗಲತ್ತಿ ಗ್ರಾಮದಲ್ಲಿ ಒಟ್ಟು 20 ಎಕರೆ ತೋಟ, ಭತ್ತದ ಗದ್ದೆಗಳು ಕುಸಿದು ಕಳೆದ ಬಾರಿ ಸಂಪೂರ್ಣ ಪರಿಹಾರ ನೀಡಲು ಸಾಧ್ಯವಾಗಿರಲಿಲ್ಲ. ಈ ಕುರಿತು ಸಚಿವರು ಅಧಿಕಾರಿಗಳಿಗೆ, ಗುಡ್ಡ ಕುಸಿತದಿಂದ ಗದ್ದೆ ತೋಟದಲ್ಲಿ ಶಿಲ್ಟ್ ತೆಗೆಯುವುದು, ಚಾನೆಲ್ ಮಾಡಿಕೊಡಲು ಹಾಗೂ ತೋಟದ ಗಿಡ ನೆಡುವುದನ್ನ ಎನ್ ಆರ್ ಎಜಿಎ ಅಡಿಯಲ್ಲಿ ಮಾಡಿಕೊಡಲು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಸಾಥ್ ನೀಡಿದ್ದರು.








