ಯೂರೋ ಕಪ್ 2021 – ಇಟಲಿಯ ಮುಂದೆ ನಡೆಯಲಿಲ್ಲ ಸ್ಪೇನ್ ಗೂಳಿಗಳ ಆರ್ಭಟ…ಪ್ರಶಸ್ತಿ ಹಂತ ತಲುಪಿದ ಇಟಲಿ
2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಟಲಿ ತಂಡ ಫೈನಲ್ ಪ್ರವೇಶಿಸಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಟಲಿ ತಂಡ 4-2 ಗೋಲುಗಳಿಂದ ಸ್ಪೇನ್ ತಂಡವನ್ನು ಪರಾಭವಗೊಳಿಸಿದೆ.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಟಲಿ ತಂಡ ಇಂಗ್ಲೆಂಡ್ ಅಥವಾ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ತಂಡಗಳು ಹೋರಾಟ ನಡೆಸಲಿವೆ.
ಮೊದಲ ಸೆಮಿಫೈನಲ್ ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿಯನ್ನೇ ಒಡ್ದಿದವು. ಮೊದಲಾರ್ಧದ ರೋಚಕ ಹೋರಾಟದಲ್ಲಿ ಉಭಯ ತಂಡಗಳು ಗೋಲು ದಾಖಲಿಸುವ ಪ್ರಯತ್ನ ನಡೆಸಿದ್ರೂ ಪ್ರಯೋಜನವಾಗಲಿಲ್ಲ.
ಆದ್ರೆ ಪಂದ್ಯದ 60ನೇ ನಿಮಿಷದಲ್ಲಿ ಇಟಲಿ ತಂಡದ ಪರ ಫೆಡೆರಿಕ್ ಚಿಯೆಸ್ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ರು. ಆದ್ರೆ ಇಟಲಿ ತಂಡದ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. 80ನೇ ನಿಮಿಷದಲ್ಲಿ ಸ್ಪೇನ್ ತಂಡದ ಆಲ್ವೊರೊ ಮೊರಾಟ ಅವರು ಗೋಲು ದಾಖಲಿಸುವ ಮೂಲಕ ಅಂತರವನ್ನು 1-1ರಿಂದ ಸಮಗೊಳಿಸಿದ್ರು.
ಹೀಗೆ ನಿಗದಿತ ಅವಧಿಯಲ್ಲಿ 1-1ರಿಂದ ಸಮಬಲಗೊಂಡಿರುವುದರಿಂದ ಹೆಚ್ಚುವರಿ ಆಟವನ್ನು ಆಡಿಸಲಾಯ್ತು. ಅಲ್ಲೂ ಕೂಡ ಸಮಬಲದ ಹೋರಾಟ ಕಂಡುಬಂದಿರುವುದರಿಂದ ಅಂತಿಮವಾಗಿ ಫಲಿತಾಂಶವನ್ನು ಪೆನಾಲ್ಟಿ ಶೂಟ್ ಔಟ್ ನಲ್ಲಿ ನಿರ್ಧರಿಸಲಾಯ್ತು. ಪೆನಾಲ್ಟಿ ಶೂಟ್ ಔಟ್ ನಲ್ಲಿ ಇಟಲಿ ತಂಡ 4-2ರಿಂದ ಗೆದ್ದುಕೊಂಡು ಫೈನಲ್ ಪ್ರವೇಶಿಸಿತು.
ಹಾಗೇ ಇಟಲಿ ತಂಡ 2012ರ ಯೂರೋ ಕಪ್ ಫೈನಲ್ ಪಂದ್ಯದ ಸೋಲಿಗೆ ಸ್ಪೇನ್ ತಂಡದ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಅಷ್ಟೇ ಅಲ್ಲ, ಒಟ್ಟು ನಾಲ್ಕನೇ ಬಾರಿ ಯೂರೋ ಕಪ್ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೂ ಇಟಲಿ ಪಾತ್ರವಾಗಿದೆ.
ಈ ಹಿಂದೆ 1968ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಇಟಲಿ, 2000 ಮತ್ತು 2012ರಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿತ್ತು. ಇದೀಗ ಎರಡನೇ ಬಾರಿ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋ ಹಠದಲ್ಲಿದೆ. ಹಾಗೇ ವಿವಿಧ ಪ್ರತಿಷ್ಠಿತ ಟೂರ್ನಿಗಳಲ್ಲಿ ಗರಿಷ್ಠ ಬಾರಿ ಫೈನಲ್ ಪ್ರವೇಶಿಸಿದ ಎರಡನೇ ತಂಡವಾಗಿ ಇಟಲಿ ಹೊರಹೊಮ್ಮಿದೆ. ಇಟಲಿ 10 ಬಾರಿ ಫೈನಲ್ ಪ್ರವೇಶಿಸದ್ರೆ, ಜರ್ಮನಿ 14 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದೆ.
ಇನ್ನೊಂದೆಡೆ ಸ್ಪೇನ್ ತಂಡ ನಿರಾಸೆ ಅನುಭವಿಸಿದೆ. ಯುರೋ ಕಪ್ ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿರುವ ಸ್ಪೇನ್ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. 1984ರಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಸ್ಪೇನ್ 1984ರಲ್ಲಿ ರನ್ನರ್ ಅಪ್ ಪಡೆದುಕೊಂಡಿತ್ತು.
ಬಳಿಕ 2008 ಮತ್ತು 2012ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದ ಸ್ಪೇನ್ ಈ ಬಾರಿ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿದೆ.