ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೈನ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಸಂಬಂಧ ಹತ್ತು ಬಾರಿ ನೋಟಿಸ್ ನೀಡಿದರೂ ತಮ್ಮ ಅಭಿಪ್ರಾಯ ಒಂದೇ ಇದೆ ಎಂದು ಅವರು ಖಡಕ್ ಮಾತುಗಳನ್ನು ಆಡಿದ್ದಾರೆ.
ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರುತ್ತಾರೆ ಎಂಬ ಹೇಳಿಕೆ ನೀಡಿದ್ದ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೈನ್, ಅದನ್ನು ಪ್ರಶ್ನಿಸುವ ಅಗತ್ಯ ಇಲ್ಲ ಎಂದಿದ್ದಾರೆ. ನಾನು ಶಾಸಕ, ಯತೀಂದ್ರ ಸಿದ್ದರಾಮಯ್ಯ ಅವರು ಎಂಎಲ್ಸಿ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಕೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಆದರೆ ತಮ್ಮ ನಿಲುವು ಮಾತ್ರ ಸ್ಪಷ್ಟವಾಗಿದೆ ಎಂದು ಹೇಳಿದ ಅವರು, ನನಗೆ ಎಷ್ಟೇ ನೋಟಿಸ್ ಬಂದರೂ, ನನ್ನ ಉದ್ದೇಶ ಒಂದೇ. ಡಿಕೆ ಶಿವಕುಮಾರ್ ಅವರು ಕನಿಷ್ಠ ಒಂದು ಬಾರಿ ಆದರೂ ಮುಖ್ಯಮಂತ್ರಿ ಆಗಬೇಕು ಎಂದು ಪುನರುಚ್ಚರಿಸಿದ್ದಾರೆ.
ಈ ಹೇಳಿಕೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೊಮ್ಮೆ ನಾಯಕತ್ವ ಚರ್ಚೆಗೆ ಆಸ್ಪದ ನೀಡಿದ್ದು, ಸಿಎಂ ಸ್ಥಾನ ಹಂಚಿಕೆ ಕುರಿತ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೆ ಹೊರಬರುತ್ತಿರುವ ಸೂಚನೆ ನೀಡುತ್ತಿದೆ.








