ಚಿನ್ನದ ಹುಡುಗಿ ಹಿಮಾ ದಾಸ್ಗೆ ಸ್ಪೂರ್ತಿಯಾದ ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್..!
ಯುವ ಕ್ರಿಕೆಟಿಗರಿಗೆ ಯಾಕೆ… ಪ್ರತಿಯೊಬ್ಬ ಯುವ ಕ್ರೀಡಾಪಟುಗಳಿಗೆ ಎಂದೆಂದಿಗೂ ವಿಶ್ವ ಕ್ರಿಕೆಟ್ ನ ದೇವರು ಖ್ಯಾತಿಯ ಸಚಿನ್ ತೆಂಡುಲ್ಕರ್ ಸ್ಪೂರ್ತಿಯಾಗಿರುತ್ತಾರೆ.. ಪ್ರೇರಣೆಯಾಗಿರುತ್ತಾರೆ.. ಮಾದರಿಯಾಗಿರುತ್ತಾರೆ. ಇದೀಗ ಭಾರತದ ಚಿನ್ನದ ಹುಡುಗಿ ಹಿಮಾ ದಾಸ್ ಗೂ ಸಚಿನ್ ಸ್ಪೂರ್ತಿಯಾಗಿದ್ದಾರೆ.
ಕಳೆದ ವರ್ಷ ಹಿಮಾ ದಾಸ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ಆಗ ಮುಂಬರುವ ಟೋಕಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವ ಆಸೆಯೂ ಕಮರಿ ಹೋಗಿತ್ತು. ಆಗ ಅವರಿಗೆ ಪ್ರೇರಣೆ, ಸ್ಪೂರ್ತಿಯಾಗಿದ್ದು ಸಚಿನ್ ತೆಂಡುಲ್ಕರ್. ಈ ವಿಚಾರವನ್ನು ಸ್ವತಃ ಹಿಮಾ ದಾಸ್ ಅವರೇ ಹೇಳಿಕೊಂಡಿದ್ದಾರೆ.
ಕ್ರೀಡಾಪಟುಗಳಿಗೆ ಗಾಯ ಅನ್ನೋದು ಮಾಮೂಲಿ. ನಾನು ದೇವರು ಎಂದು ಭಾವಿಸಿರುವ ಸಚಿನ್ ತೆಂಡುಲ್ಕರ್ ಕೂಡ ಗಾಯಗೊಂಡಿದ್ದರು. ಹಾಗೇ ಮಹೇಂದ್ರ ಸಿಂಗ್ ಧೋನಿ, ಹುಸೇನ್ ಬೋಲ್ಟ್ ಕೂಡ ಗಾಯಗೊಂಡಿದ್ದರು. ಕೆಲವೊಂದು ಬಾರಿ
ಗಾಯದಿಂದ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗೇ ನನಗೂ ಆಗಿದೆ ಎಂದು ಹಿಮಾ ದಾಸ್ ಹೇಳಿದ್ದಾರೆ.
ಏಪ್ರಿಲ್ 2019 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ವೇಳೆ ಹಿಮಾ ದಾಸ್ ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮುಂಬರುವ ಟೊಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವುದು ಅಸಾಧ್ಯ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಆದ್ರೆ ಕೋವಿಡ್-19ನಿಂದ ಅರ್ಹತಾ ಸ್ಪರ್ಧೆಯನ್ನು ಮುಂದೂಡಲಾಗಿದೆ. ಇದೀಗ ಅವರು ಜೂನ್ 29, 2021ರಂದು ನಡೆಯಲಿರುವ ಅರ್ಹತಾ ಸ್ಪರ್ಧೆಯನ್ನು ಎದುರು ನೋಡುತ್ತಿದ್ದಾರೆ.
ಇದೀಗ ನಾನು ಫಿಟ್ ಆಗಿದ್ದೇನೆ. ಹಾಗೇ ಅಭ್ಯಾಸ ಕೂಡ ಮಾಡುತ್ತಿದ್ದೇನೆ. ಆದ್ರೆ ಅಲ್ಲಿ ಸ್ಪರ್ಧೆ ವಿಭಿನ್ನವಾಗಿರುತ್ತದೆ. ಹೀಗಾಗಿ ನಮ್ಮ ಫಿಟ್ ನೆಸ್ ಲೆವಲ್ ಅನ್ನು ಉತ್ತಮಪಡಿಸಿಕೊಳ್ಳಬೇಕು. ಕೆಲವು ಕ್ರೀಡಾಕೂಟಗಲ್ಲಿ ಭಾಗವಹಿಸಿದ್ದ ನಂತರ ನನ್ನ ಗುಣಮಟ್ಟ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ಹಿಮಾ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ಅವರು ಸತತ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅದು ಪೊಲಂಡ್ ಆಗಿರಲಿ.. ಬೇರೆ ಎಲ್ಲೂ ಆಗಿರಲಿ.. ಕ್ರೀಡಾಕೂಟದ ಸ್ಪರ್ಧೆ ಸಣ್ಣದು ದೊಡ್ಡದು ಎಂಬುದು ಇರಲ್ಲ. ನಾನು ಓಡುವುದನ್ನು ಇಷ್ಟಪಡುತ್ತೇನೆ. ಇದು ನನ್ನ ಆದ್ಯತೆಯೂ ಆಗಿದೆ. ನಾನು ಉತ್ತಮ ಟೈಮಿಂಗ್ನೊಂದಿಗೆ ಗುರಿಮುಟ್ಟಬೇಕು. ನಾನು ಸಮಯದ ಜೊತೆ ಓಡುತ್ತೇನೆ.. ಪದಕಕ್ಕಾಗಿ ಅಲ್ಲ ಎಂದು ಹಿಮಾ ದಾಸ್ ಹೇಳಿದ್ದಾರೆ.








