ಕೊರೊನಾ ತಳಿ ಪತ್ತೆ.. ಸಂಜೆ ಸಿಎಂ ತುರ್ತುಸಭೆ.. ರಾಜ್ಯದಲ್ಲಿ ಶಾಲಾ-ಕಾಲೇಜು ಬಂದ್..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಮತ್ತೆ ಶುರುವಾಗಿದೆ. ಇಷ್ಟು ದಿನ ಇದ್ದೂ ಇಲ್ಲದಂತಿದ್ದ ಕೊರೊನಾ ಸೋಂಕು ಇದೀಗ ತುಸು ಜೋರಾಗಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಗುವುದಾ ಎಂಬ ಪ್ರಶ್ನೆ ಕಾಡುತ್ತಿದೆ.
ಧಾರವಾಡದ ಎಸ್ ಡಿ ಎಂ ಕಾಲೇಜಿನಲ್ಲಿ 281 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
ಬೆಂಗಳೂರಿನ ಸುಕ್ರತ ಕಾಲೇಜಿನಲ್ಲಿ 17 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಆನೇಕಲ್ ನ ಸ್ಪೂರ್ತಿ ನಸಿರ್ಂಗ್ ಕಾಲೇಜಿನಲ್ಲಿ 12 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಮೈಸೂರಿನ ಕಾಲೇಜಿನಲ್ಲೂ ಕೂಡ ಕೊರೊನಾ ಸ್ಫೋಟವಾಗಿರುವ ಬಗ್ಗೆ ವರದಿಗಳು ತಿಳಿಸುತ್ತಿವೆ.
ಶಾಲಾ-ಕಾಲೇಜು ಹಾಗೂ ಹಾಸ್ಟಲ್ ಗಳಲ್ಲಿ ವಿದ್ಯಾರ್ಥಿಗಳು ಒಂದೇ ಕಡೆ ಇರುತ್ತಾರೆ.
ಮುಖ್ಯವಾಗಿ ಹಾಸ್ಟೆಲ್ ಗಳಲ್ಲಿ ಕನಿಷ್ಠ 200 ವಿದ್ಯಾರ್ಥಿಗಳು ಒಂದೇ ಕಡೆ ಊಟ ಮಾಡುತ್ತಾರೆ.
ಹೀಗೆ ಸಾಮೂಹಿಕವಾಗಿ ಊಟ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.
ಅಂದಹಾಗೆ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು 2 ವರ್ಷ ಬಂದ್ ಆಗಿದ್ದ ಶಾಲೆ-ಕಾಲೇಜುಗಳು ರೀ ಓಪನ್ ಆಗುತ್ತಿದ್ದಂತೆ ಹಲವು ಶಾಲೆ ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ತುರ್ತು ಸಭೆ ನಡೆಸಲಿದ್ದಾರೆ. ಈ ವೇಳೆ ಶಾಲೆ-ಕಾಲೇಜುಗಳನ್ನು ಬಂದ್ ಮಾಡಬೇಕಾ ಅಥವಾ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಾ ಎಂಬ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.









