ಶತ್ರುಗಳಿಗೆ ನಡುಕ ಹುಟ್ಟಿಸುವ ‘ಅರಿಹಂತ್ ಜಲಾಂತರ್ಗಾಮಿ ನೌಕೆ’..! INDIAN ARMY
ಯುದ್ಧನೌಕೆಗಳಂತೆ ಜಲಾಂತರ್ಗಾಮಿ ನೌಕೆಗಳು ಸಹ ಭಾರತೀಯ ನೌಕಾಸೇನೆಯ ಬೆನ್ನೆಲುಬು. ಅದರಲ್ಲೂ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆ ಅರಿಹಂತ್ ಹೆಸರು ಕೇಳಿದ್ರೆ ಸಾಕು ಶತ್ರುದೇಶಗಳಿಗೆ ನಡುಕ ಹುಟ್ಟುತ್ತದೆ.
ಭಾರತೀಯ ನೌಕಾಸೇನೆಯಲ್ಲಿರುವ ಜಲಾಂತರ್ಗಾಮಿ ನೌಕೆಗಳಲ್ಲಿ ಮೊದಲ ಸ್ವದೇಶೀ ನಿರ್ಮಿತ ಜಲಾಂತರ್ಗಾಮಿ ನೌಕೆ ಎಂಬ ಹೆಗ್ಗಳಿಕೆ ಐಎನ್ಎಸ್ ಅರಿಹಂತದ್ದು. 6 ಸಾವಿರ ಟನ್ ಭಾರದ ಇಂಥ ಅತ್ಯಾಧುನಿಕ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸುವ, ನಿರ್ಮಿಸುವ ಹಾಗೂ ಕಾರ್ಯಾಚರಣೆಗೆ ಒಳಪಡಿಸಿದ ಗರ್ವ ಭಾರತಕ್ಕಿದೆ.
700 ಕಿ.ಮೀ.ನಿಂದ ಹಿಡಿದು 3,500 ಕಿ.ಮೀ. ದೂರದವರೆಗಿನ ಕ್ಷಿಪಣಿಗಳನ್ನು ಹಾರಿಸಬಲ್ಲ ಮತ್ತು ಶತ್ರು ಕ್ಷಿಪಣಿಗಳನ್ನು ರಹಸ್ಯವಾಗಿ ಸಮುದ್ರದಾಳದಲ್ಲಿ ಕುಳಿತು ನಾಶಪಡಿಸುವ ಸಾಮರ್ಥ್ಯ ‘ಅರಿಹಂತ್’ ಜಲಾಂತರ್ಗಾಮಿ ನೌಕೆಗಿದೆ. ಇನ್ನು ಈ ನೌಕೆಯನ್ನು ‘ಅಮೇರಿಕಾದ ಅಡ್ವಾನ್ಸ್ಡ್ ಟೆಕ್ನಾಲಜಿ ಹಡಗು ನಿರ್ಮಾಣ’ದ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಿ ವಿನ್ಯಾಸಗೊಳಿಸಲಾಗಿದೆ. ಅಣ್ವಸ್ತ್ರ ಸಿಡಿತಲೆಗಳಿರುವ ಕ್ಷಿಪಣಿಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಮತ್ತು
ಅಣ್ವಸ್ತ್ರ ದಾಳಿಗೆ ಪ್ರತಿ ದಾಳಿ ನಡೆಸುವ ಶಕ್ತಿ ಅರಿಹಂತ್ ಜಲಾಂತರ್ಗಾಮಿ ನೌಕೆಗಿದೆ. ಐಎನ್‌ಎಸ್ ಅರಿಹಂತ್ ಬಾಹ್ಯ ಬೆದರಿಕೆಗಳಿಂದ ದೇಶವನ್ನು ರಕ್ಷಿಸುವಲ್ಲಿ ನೆರವಾಗಲಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿ ಹೊತ್ತೊಯ್ಯಬಲ್ಲ ಜಲಾಂತರ್ಗಾಮಿ ನೌಕೆ ‘ಐಎನ್‌ಎಸ್ ಅರಿಹಂತ್’ ತನ್ನ ಪ್ರಥಮ ರಹಸ್ಯ ಗಸ್ತನ್ನು ಯಶಸ್ವಿಯಾಗಿ ಪೂರೈಸುವುದರ ಮೂಲಕ ಸಾಕಷ್ಟು ಸುದ್ದಿಯಲ್ಲಿತ್ತು. ಇದರೊಂದಿಗೆ ಚೀನಾ ಮತ್ತು ಪಾಕಿಸ್ತಾನ ಒಡ್ಡಿದ್ದ ಅಣು ಭೀತಿ ಸವಾಲನ್ನು ಭಾರತ ಯಶಸ್ವಿಯಾಗಿ ಮೆಟ್ಟಿ ನಿಂತು ಭಾರತೀಯ ಸೇನೆಗೆ ಬೆನ್ನೆಲುಬಾಗಿದೆ. ರಷ್ಯಾದ ಚಾರ್ಲಿ-1 ವಿನ್ಯಾಸವನ್ನು ಆಧರಿಸಿ ಇದನ್ನು ಅಭಿವೃದ್ಧಿಡಿಸಲಾಗಿದೆ. 1970ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ತಯಾರಿಸುವಂತೆ ಡಿಆರ್‌ಡಿಒಗೆ ಸೂಚಿಸುವುದರೊಂದಿಗೆ ಇದರ ಈ ಕನಸು ಆರಂಭವಾಗಿತ್ತು.
ಇದುವರೆಗೂ ಭಾರತ ರಷ್ಯಾ ಸಹಯೋಗದೊಂದಿಗೆ ತಯಾರಿಸಿದ ಐಎನ್‌ಎಸ್ ಚಕ್ರಾ ಸಬ್‌ಮೆರಿನ್‌ಗಳನ್ನು ಬಳಸುತ್ತಿತ್ತು. 2012ರಿಂದ 10 ವರ್ಷಗಳಿಗೆ ಇವುಗಳನ್ನು ಭೋಗ್ಯಕ್ಕೆ ಪಡೆಯಲಾಗಿದೆ. ಅರಿಹಂತ್ ಜಲಾಂತರ್ಗಾಮಿ ನೌಕೆಯ ಮತ್ತೊಂದು ವಿಶೇಷತೆ ಎಂದರೆ, ಶತ್ರು ದೇಶಗಳ ಸಾಗರ ತೀರಗಳಲ್ಲಿ ಸದ್ದಿಲ್ಲದೆ ಸುದೀರ್ಘ ಕಾಲ ಲಂಗರು ಹಾಕಬಲ್ಲದು, ಇದರ ಉಪಸ್ಥಿತಿಯನ್ನು ಗುರುತಿಸುವುದು ಕಷ್ಟ.