ಮೈ ಝುಂ ಎನ್ನಿಸುವ ಭಾರತೀಯ ನೌಕಾಧಿಕಾರಿಗಳ ಕಠಿಣ ತರಬೇತಿ..!! – Part:2
ಹಿಂದಿನ ಸಂಚಿಕೆಯಲ್ಲಿ ಭಾರತೀಯ ನೌಕಾಸೇನೆಯ ಅಕಾಡೆಮಿಯ ಇತಿಹಾಸದ ಬಗ್ಗೆ ಮಾಹಿತಿ ತಿಳಿದುಕೊಂಡ್ರಿ. ಇಂದು ಸಾಮಾನ್ಯ ಕೆಡೆಟ್ ಒಬ್ಬ ದೇಶ ರಕ್ಷಣೆಯ ಹೊಣೆ ಹೊರಲು ಮಾಡುವ ದೈಹಿಕ ಮತ್ತು ಮಾನಸಿಕ ಕಸರತ್ತುಗಳ ಬಗ್ಗೆ ತಿಳಿದುಕೊಳ್ಳೋಣ. ಕೆಡೆಟ್ ಆಗಿ ಅಕಾಡೆಮಿ ಪ್ರವೇಶಿಸಿ ಅಧಿಕಾರಿಯಾಗಿ ಅಲ್ಲಿಂದ ಆಚೆ ಬರುವ ಪ್ರತಿಯೊಬ್ಬರ ಹಾದಿಯೂ ರೋಚಕ.
ನಾವಿನ್ನೂ ಬೆಚ್ಚಗೆ ಹೊದ್ದುಕೊಂಡು ಸಕ್ಕರೆ ನಿದ್ದೆ ಸವಿಯುವಾಗಲೇ ಅಲ್ಲಿ ಕೆಡೆಟ್ ಗಳ ದಿನಚರಿ ಆರಂಭವಾಗುತ್ತದೆ. ಬೆಳಗಿನ ಜಾವ ೩ ಗಂಟೆಗೆಲ್ಲಾ ಕೆಡೆಟ್ ಗಳ ತರಬೇತಿ ಅವಧಿ ಆರಂಭವಾಗಿಬಿಡುತ್ತದೆ. ಅಧಿಕಾರಿಗಳು ಅಲ್ಲಿ ಹಾಜರಿರುವ ಕೆಡೆಟ್ ಗಳ ಹಾಜರಾತಿಯನ್ನು ತೆಗೆದುಕೊಳ್ಳುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಆರು ಸ್ಕ್ವಾಡ್ರನ್ ಗಳಲ್ಲಿ ಹಂಚಿಕೆಯಾಗಿರುವ ಕೆಡೆಟ್ಗಳ ಗುರಿ ಚಾಂಪಿಯನ್ ಶಿಪ್ ಬ್ಯಾನರ್ ನ್ನು ತಮ್ಮದಾಗಿರಿಸಿಕೊಳ್ಳುವತ್ತ ಮಾತ್ರ ಕೇಂದ್ರೀಕೃತವಾಗಿರುತ್ತೆ. ಅದರಲ್ಲೂ ಟ್ರೇನಿಂಗ್ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಮುಗಿಸಲು ಕೆಡೆಟ್ಗಳು ಬದ್ಧ ರಾಗಿರ್ತಾರೆ. ಎಂಥದ್ದೇ ಕಠಿಣ ಸವಾಲುಗಳು ಎದುರಾದರೂ ಅವುಗಳನ್ನು ಎದುರಿಸಲು ಮೈ ಛಳಿ ಬಿಟ್ಟು ಸಿದ್ದರಾಗಿರ್ತಾರೆ. 
ಅಧಿಕಾರಿಗಳು ನೀಡುವ ಮ್ಯಾಪ್ ತೆಗೆದುಕೊಂಡು ಹೆಗಲಮೇಲೆ ಭಾರೀ ಪ್ರಮಾಣದ ಭಾರ ಹೊತ್ತು ಕಿಲೋಮೀಟರ್ ಗಟ್ಟಲೇ ಕ್ರಮಿಸಿ ಅಂತಿಮ ಗುರಿ ತಲುಪುವುದು ಗಟ್ಟಿ ಗುಂಡಿಗೆಯ ಕೆಡೆಟ್ಗಳಿಗೆ ಮಾತ್ರ ಸಾಧ್ಯ.
ಇನ್ನು ತರಬೇತಿ ಕ್ಯಾಂಪ್ ಗಳಷ್ಟೇ ಅಲ್ಲದೇ ಕೆಡೆಟ್ ಗಳ ದೈನಂದಿನ ಜೀವನವೂ ಸವಾಲಿನಿಂದ ಕೂಡಿರುತ್ತೆ. ಒಂದು ಸಣ್ಣ ತಪ್ಪುಮಾಡಿದ್ರೂ ದೊಡ್ಡ ಪ್ರಮಾಣದ ಶಿಕ್ಷೆಗೆ ಕೆಡೆಟ್ ಗುರಿಯಾಕ್ತಾನೆ.
ಮಳೆ ಚಳಿ ಬಿಸಿಲು ಎನ್ನುವ ಯಾವ ಸಬೂಬೂ ಇಲ್ಲಿನಡೆಯುವುದಿಲ್ಲ. ಎಂಥ ಪರಿಸ್ಥಿತಿ ಇದ್ದರೂ ದಿನದ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ನೌಕಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಏನೇನು ಕೌಶಲ್ಯಗಳು ಬೇಕೋ ಅದೆಲ್ಲವನ್ನೂ ಕೆಡೆಟ್ ಇಲ್ಲಿಂದಲೇ ಕಲಿಯುತ್ತಾನೆ. ಇನ್ನು ಕೆಡೆಟ್ ನ ನಾಲ್ಕು ವರ್ಷದ ಅವಧಿಯಲ್ಲಿ ಮುಖ್ಯ ಪಾತ್ರ ವಹಿಸುವುದು ಡ್ರಿಲ್ಲಿಂಗ್. ಇದು, ನೌಕೆಯಲ್ಲಿ ಕಾರ್ಯನಿರ್ವಹಿಸುವಾಗ ಎದುರಾಗುವ ಸಾಂದರ್ಭಿಕ ವಿಪತ್ತುಗಳಿಗೆ ಅಧಿಕಾರಿಯೊಬ್ಬ ತಕ್ಷಣಕ್ಕೆ ರಿಯಾಕ್ಟ್ ಮಾಡುವ ಕೌಶಲಗಳನ್ನು ವೃದ್ದಿಸ್ತದೆ.
ಇನ್ನು ಅಕಾಡೆಮಿ ಸೇರುವ ಪ್ರತಿಯೊಬ್ಬ ಕೆಡೆಟ್ ಆರು ತಿಂಗಳೊಳಗೆ ಬೇಸಿಕ್ ಸ್ವಿಮ್ಮಿಂಗ್ ಕೌಶಲಗಳನ್ನು ಕಲಿಯುವುದು ಕಡ್ಡಾಯ. ಮೊದಲನೇ ಸೆಮೆಸ್ಟರ್ ಪಾಸ್ ಮಾಡಲು ಕೆಡೆಟ್ಗಳು ಈಜು ಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕು. ಇನ್ನು ಅಕಾಡೆಮಿಯಲ್ಲಿ ಕೆಡೆಟ್ಗಳ ಜೀವನ ಶೈಲಿಮತ್ತು ಶಿಸ್ತಿಗೆ ಹೆಚ್ಚಿನಪ್ರಾಶಸ್ತ್ಯ. ಇದನ್ನು ಗಮನಿಸಲೆಂದೇ ಅಧಿಕಾರಿಯೊಬ್ಬರ ನೇಮಕವಾಗಿರುತ್ತದೆ. ಇಲ್ಲಿ ಕೊಂಚ ಎಡವಟ್ಟಾದರೂ ಅಧಿಕಾರಿಗಳು ನೀಡುವ ಪನಿಶಮೆಂಟ್ ಗೆ ಕೆಡೆಟ್ ಸಿದ್ಧನಾಗಬೇಕು. ಅಕಾಡೆಮಿಯಲ್ಲಿ ಹೀಗೆ ಸಣ್ಣ ಪುಟ್ಟ ತಪ್ಪಿಗೆ ಪನಿಶ್ಮೆಂಟ್ ನೀಡುವುದೆಂದರೆ ಕೆಡೆಟ್ಗಳಿಗೆ ಶಿಕ್ಷೆ ನೀಡಲಲ್ಲ.ಬದಲಿಗೆ ಅವರನ್ನು ಸರಿ ಮಾಡಲು ಎಂಬುದು ಅಧಿಕಾರಿಗಳ ಮಾತು…
ಕೆಟೆಟ್ಗಳು ಅಕಾಡೆಮಿಯ ಹೈಟೆಕ್ ಲ್ಯಾಬ್ ಗಳಲ್ಲಿ ನ್ಯಾವಿಗೇಷನ್ ಬಗ್ಗೆ ಪರಿಣಿತಿ ಹೊಂದುತ್ತಾರೆ. ಇದು ನೈಜ ನೌಕೆಗಳಲ್ಲಿ ಸಮುದ್ರಕ್ಕಿಳಿದಾಗ ನೌಕೆಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ತಿಳಿಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶಿಪ್ ಹ್ಯಾಂಡಲ್ ಮಾಡಲು ಬೇಕಾದ ಬೇಸಿಕ್ ಸ್ಕಿಲ್ಸ್ ಗಳ ಬಗ್ಗೆ ಅಧ್ಯಯನ ಮಾಡುವುದು ಕಡ್ಡಾಯ… ಕೆಡೆಟ್ ಗಳ ಆಹಾರ ಪದ್ಧತಿ, ಪಠ್ಯಕ್ರಮ ಸೇರಿದಂತೆ ಇನ್ನೂ ಕೆಲ ಇಂಟರೆಸ್ಟಿಂಗ್ ಮಾಹಿತಿಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
ವಾಣಿ ಸೊನ್ನ








