ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಕೊರೊನಾದಿಂದ ಮೃತಪಟ್ಟ ರೋಗಿಗಳನ್ನು ಕಸದಂತೆ ಎಸೆದು ಮಣ್ಣು ಮಾಡಿದ ಘಟನೆ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಪ್ರತ್ಯೇಕ ಜಾಗ ಗುರುತಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಅಂತ್ಯಕ್ರಿಯೆ ಉದ್ದೇಶಕ್ಕೆ ಊರ ಹೊರಗಡೆ ಎರಡು ಎಕರೆ ಜಮೀನು ಗುರುತಿಸುವಂತೆ ಶೀಘ್ರದಲ್ಲೇ ಆದೇಶ ಮಾಡಲಾಗುವುದು. ಕೋವಿಡ್ ಸೋಂಕಿತರ ಶವಗಳ ಅಂತ್ಯಕ್ರಿಯೆ ವಿಚಾರವಾಗಿ ದೂರುಗಳು ಬರುತ್ತಿವೆ. ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಆಕ್ಷೇಪಣೆಗಳು ಹೆಚ್ಚಿವೆ ಎಂದರು.
ಶವಸಂಸ್ಕಾರದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶದ ಮಾದರಿಯಲ್ಲಿ ಊರ ಹೊರಗೆ ಸುಮಾರು ಎರಡು ಎಕರೆ ಜಾಗ ಗುರುತಿಸಿ ಅಲ್ಲೇ ಸೋಂಕಿತರ ಶವಗಳ ಅಂತ್ಯಕ್ರಿಯೆ ಮಾಡುವಂತೆ ಬೆಂಗಳೂರಿಗೆ ಹೋದ ತಕ್ಷಣ ಆದೇಶಿಸುವೆ ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಿದ ಆಯುರ್ವೇದ ಮಾತ್ರೆಗಳು, ಔಷಧಿ ಪ್ರಯೋಗ ಯಶಸ್ವಿಯಾಗಿದೆ. ಸೋಂಕಿತರು ಗುಣಮುಖರಾಗಿದ್ದಾರೆ. ಡಾ. ಗಿರಿಧರ ಅವರು ಸೋಂಕಿತರ ಸಂಪರ್ಕಕ್ಕೆ ಬಂದ ಸುಮಾರು 42 ಸಾವಿರ ಮಂದಿಗೆ ಉಚಿತವಾಗಿ ಆಯುರ್ವೇದ ಔಷಧಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.