ಬೊಮ್ಮಾಯಿ ಅವರೇ ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ಇದ್ಯಾ
ಬೆಂಗಳೂರು : ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬಸವರಾಜ ಬೊಮ್ಮಾಯಿ ಅವರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಸಿದ್ದರಾಮಯ್ಯ, ನನ್ನ ಅಧಿಕಾರವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಧಮ್ಕಿ ಹಾಕುತ್ತಲೇ ಇದ್ದಾರೆ.. ಧಮ್ ಇದ್ದರೆ ಮೊದಲು ಆ ಕೆಲಸ ಮಾಡಿ. ನಾನು ಅದನ್ನು ಎದುರಿಸಲು ಸದಾ ಸಿದ್ಧ. ಈ ಬ್ಲಾಕ್ ಮೇಲ್ ತಂತ್ರಗಳನ್ನೆಲ್ಲ ನಿಮ್ಮವರ ಮೇಲೆ ಬಳಸಿಕೊಳ್ಳಿ.

ನಮ್ಮ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೊದಲು ಬಿಜೆಪಿ ನಾಯಕರುಗಳ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಾಲು ಸಾಲು ಹಗರಣಗಳನ್ನು ಇತ್ಯರ್ಥ ಮಾಡಿಕೊಂಡು ಬನ್ನಿ. ನೀವು ಬೀಸುವ ಕತ್ತಿ ನಿಮ್ಮ ಕುತ್ತಿಗೆಯನ್ನೇ ಕೊಯ್ಯದಿರಲಿ ಬಸವರಾಜ ಬೊಮ್ಮಾಯಿ.
ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನೀವು ಸಿದ್ಧರಿದ್ದಿರಾ ಬಸವರಾಜ ಬೊಮ್ಮಾಯಿ ಅವರೇ? ನಮ್ಮ ಪಕ್ಷ ಸಿದ್ಧ ಇದೆ. ನೀವು ಸಿದ್ಧ ಇದ್ದರೆ ಸಾರ್ವಜನಿಕ ಚರ್ಚೆಗೆ ಸ್ಥಳ-ಸಮಯ ನೀವೇ ನಿರ್ಧರಿಸಿ ತಿಳಿಸಿ ನಾನು ಬರ್ತೇನೆ. ಧಮ್ ಎಂದರೆ ಧಮ್ ಬಿರಿಯಾನಿ ಎಂದು ನೀವು ತಿಳಿದುಕೊಂಡ ಹಾಗಿದೆ.
ಭ್ರಷ್ಟಾಚಾರವನ್ನೇ ವಿಷಯವನ್ನಾಗಿಟ್ಟು ಚುನಾವಣೆ ಎದುರಿಸುವ ಧಮ್ ನಿಮಗಿದೆಯೇ ಬಸವರಾಜ ಬೊಮ್ಮಾಯಿ ಅವರೇ? ನಿಮಗೆ ಆ ಧಮ್ ಇಲ್ಲ. ಕೊನೆಗೆ ಹಿಂದು-ಮುಸ್ಲಿಮ್, ಮಂದಿರ ಮಸೀದಿ, ಹಿಜಾಬ್ – ಕೇಸರಿ ಶಾಲುಗಳ ವಿವಾದದಲ್ಲಿಯೆ ನಿಮ್ಮ ಪ್ರಚಾರ ಕೊನೆಗೊಳ್ಳುವುದು. ಬೇರೆ ದಾರಿ ನಿಮಗಿಲ್ಲ ಎಂದು ಬರೆದುಕೊಂಡಿದ್ದಾರೆ.








