ನವದೆಹಲಿ : ಪೊಲೀಸ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ಧರ್ಮ ನನ್ನದಾಗಿತ್ತು. ನನಗೆ ಎಲ್ಲಾ ಧರ್ಮದವರೂ ಸ್ನೇಹಿತರು ಇದ್ದಾರೆ. ಬಿಜೆಪಿ ಸೇರಿದ ಮೇಲೆ ಬಿಜೆಪಿ ಸಿದ್ಧಾಂತಕ್ಕೆ ಬದ್ಧನಾಗಿದ್ದು, ನಿಷ್ಠೆಯಿಂದ ಯೋಧನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಸದಸ್ಯತ್ವ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಕೋರಿದರು.
ಈ ವೇಳೆ ಮಾತನಾಡಿದ ಅಣ್ಣಾಮಲೈ, ನಾನು ಸಾಮಾನ್ಯ ಕಾರ್ಯಕರ್ತನಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗಿಂತ ಮುನ್ನ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ಕೆಲಸ ಮಾಡಿದ್ದು, ನಾನು ಪಕ್ಷದಲ್ಲಿ ಏನನ್ನು ನಿರೀಕ್ಷೆ ಮಾಡದೆ ಸೇರ್ಪಡೆಯಾಗಿದ್ದೇನೆ. ನಾನು ಐತಿಹಾಸಿಕ ಹಿನ್ನೆಲೆಯುಳ್ಳ ನೆಲದಿಂದ ಬಂದಿದ್ದೇನೆ. ನನ್ನ ನೆಲದ ತಿರುವಳ್ಳವರ್ ಬರೆದ ತಿರುಕ್ಕುರಳ್ ಕೃತಿ ರಾಜ ಹಾಗೂ ಆಡಳಿತಗಾರನಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ನನ್ನ ನೆಲ ಜ್ಞಾನ, ಸ್ಫೂರ್ತಿ, ಧೈರ್ಯ ಹಾಗೂ ಭಯವಿಲ್ಲದೇ ಕಾರ್ಯನಿರ್ವಹಿಸುವ ಬಗ್ಗೆ ಹೇಳುತ್ತದೆ. ಈ ಎಲ್ಲಾ ಗುಣಗಳನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರಲ್ಲಿ ನೋಡಿದ್ದೇನೆ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕು. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು.
![]()








