ಕೋಲಾರ, ಮೇ 25 : ಹೆಮ್ಮಾರಿ ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಲೇ ಇದ್ದಾರೆ. ಆದ್ರೆ ಹಾಗೆ ವಿತರಿಸುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟದತ್ತ ಜನಪ್ರತಿನಿಧಿಗಳು ನಿಗಾ ವಹಿಸುತ್ತಿಲ್ಲ. ಕೊರೊನಾ ಹೆಸರಲ್ಲಿ ರಾಜಕಾರಣಿಗಳು ಕೇವಲ ಫೋಟೋಗಾಗಿ ಆಹಾರ ದಿನಸಿ ವಸ್ತುಗಳನ್ನು ವಿತರಿಸುತ್ತಿದ್ದಾರೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಸುತ್ತಿದೆ.
ಈ ಮಧ್ಯೆ ಅಬಕಾರಿ ಸಚಿವ ಹೆಚ್.ನಾಗೇಶ್ ಅವರ
ವಿರುದ್ಧ ಇಂತಹದ್ದೇ ಆರೋಪ ಕೇಳಿಬಂದಿದೆ. ಕೋಲಾರದ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ನಾಗೇಶ್ ಹುಳು ಬಿದ್ದ ದಿನಸಿ ವಸ್ತುಗಳನ್ನು ವಿತರಣೆ ಮಾಡಿದ್ದಾರೆ ಎಂದು ಜಿಲ್ಲೆಯ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಚಿನ್ನದ ನಾಡು ಕೋಲಾರದಲ್ಲೂ ಕೊರೊನಾ ಕೇಕೆ ಹಾಕುತ್ತಿದ್ದು, ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಟೋನ್ಮೆಂಟ್ ಝೋನ್ ಪ್ರದೇಶದಲ್ಲಿ ಸಚಿವ ನಾಗೇಶ್ ಹಾಗೂ ಬೆಂಬಲಿಗರು ಆಹಾರ ಕಿಟ್ ವಿತರಣೆ ಮಾಡಿದ್ದರು. ಆದರೆ ಇವು ಕಳಪೆ ಆಹಾರ ಪದಾರ್ಥಗಳಾಗಿವೆ. ಕೇವಲ ಪ್ರಚಾರಕ್ಕಾಗಿ ಹುಳಬಿದ್ದ ಅಕ್ಕಿ ಸೇರಿದಂತೆ ಕಳಪೆ ದಿನಸಿ ಪದಾರ್ಥಗಳು ನೀಡುತ್ತಿದ್ದಾರೆ ಎಂದು ಸಚಿವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







