ಮಂಗಳೂರು: ಲಾಕ್ ಡೌನ್ ಕಾರಣ ಮೂಡುಬಿದಿರೆಯಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿದೆ. ಮೂಡುಬಿದಿರೆಯ ಪುಚ್ಚೆಮೊಗರು ಗ್ರಾಮದ ಮೂಡುಬಿದಿರೆ-ಬಂಟ್ವಾಳ ಸೇತುವೆಯ ಕೆಳಗೆ ನಡೆಯುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 23 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ನಿರ್ದೇಶನದಂತೆ ಉಪ ಅಧೀಕ್ಷಕ ಅಮರನಾಥ ಭಂಡಾರಿ ಮಾರ್ಗದರ್ಶನದಂತೆ ಅಬಕಾರಿ ನಿರೀಕ್ಷಕ ಹರೀಶ್ ಕುಮಾರ್ ಸಿಬ್ಬಂದಿಯೊಂದಿಗೆ ನಿನ್ನೆ ಸಂಜೆ 4ರ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ 20 ಲೀಟರ್ ಗೇರು ಹಣ್ಣಿನ ಹುಳಿ ರಸ, 23 ಲೀಟರ್ ಕಳ್ಳಭಟ್ಟಿ ಹಾಗೂ ಪಾತ್ರೆ ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಆರೋಪಿ ಆನಂದ ಪೂಜಾರಿ ಎಂಬಾತ ಪರಾರಿಯಾಗಿದ್ದಾನೆ. ಈ ಬಗ್ಗೆ ಮಂಗಳೂರು ಪೂರ್ವ ವಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.