ಈ ಬಾರಿಯ ಐಪಿಎಲ್ ನಲ್ಲಿ ಟಿವಿ ವೀಕ್ಷಕರ ಸಂಖ್ಯೆ ಹೆಚ್ಚಾಗಲಿದೆ- ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಈ ಬಾರಿಯ ಐಪಿಎಲ್ ಟೂರ್ನಿ ಜೈವಿಕ ಸುರಕ್ಷತೆಯಡಿಯಲ್ಲಿ ನಡೆಯತ್ತಿರುವುದರಿಂದ ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ಇಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಮನೆಯಲ್ಲೇ ಟಿವಿ ಮುಂದೆ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡಬೇಕಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಟಿವಿ ವೀಕ್ಷಣೆಯಲ್ಲಿ ದಾಖಲೆಯನ್ನೇ ನಿರ್ಮಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕೋವಿಡ್ -19 ಸೋಂಕು ಹೆಚ್ಚಳವಾಗಿರುವುದರಿಂದ ಐಪಿಎಲ್ ಟೂರ್ನಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಅಬುಧಾಬಿ, ಶಾರ್ಜಾ ಮತ್ತು ದುಬೈ ನಲ್ಲಿ ಪಂದ್ಯಗಳು ನಡೆಯಲಿವೆ. ಕೋವಿಡ್ ಸೋಂಕಿನಿಂದ ಪ್ರೇಕ್ಷಕರಿಗೆ ಇಲ್ಲಿ ಪಂದ್ಯ ನೋಡಲು ಅವಕಾಶವಿಲ್ಲ. ಇಲ್ಲಿ ಬಿಸಿಸಿಐ ಮತ್ತು ಯುಎಇ ಸರ್ಕಾರ ಯಾವುದೇ ರಿಸ್ಕ್ ತೆಗೆದುಕೊಂಡಿಲ್ಲ. ಹಾಗಾಗಿ ಟಿವಿಯಲ್ಲೇ ಪಂದ್ಯವನ್ನು ನೋಡಬೇಕಾಗುತ್ತದೆ. ನೇರ ಪ್ರಸಾರದಲ್ಲಿ ಪಂದ್ಯಗಳನ್ನು ನೋಡುವುದರಿಂದ ಟಿವಿ ವೀಕ್ಷಕರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಅದೇ ರೀತಿ ನೇರ ಪ್ರಸಾರ ಹಕ್ಕನ್ನು ಹೊಂದಿರುವ ಸ್ಟಾರ್ ಸಂಸ್ಥೆಯು ಪ್ರತಿ 10 ಸೆಕೆಂಡ್‍ನ ಜಾಹಿರಾತಿಗೆ ಎಂಟರಿಂದ ಹತ್ತು ಲಕ್ಷ ರೂಪಾಯಿ ನಿಗದಿ ಪಡಿಸಿದೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಯನ್ನು ನೋಡಲು ಅಭಿಮಾನಿಗಳು ಟಿಕೇಟ್‍ಗಾಗಿ ಮುಗಿಬೀಳುವಂಗಿಲ್ಲ. ಐಪಿಎಲ್ ಪಂದ್ಯದ ರಸದೌತಣವನ್ನು ಕ್ರೀಡಾಂಗಣದಲ್ಲೇ ಸವಿಯಬೇಕು ಅನ್ನೋ ಕಾರಣಕ್ಕೆ ನಿದ್ದೆಗೆಟ್ಟು ಕಷ್ಟಪಟ್ಟು ಟಿಕೇಟ್‍ಗಾಗಿ ಮುಗಿಬೀಳುತ್ತಿದ್ದರು. ಈಗಾಗಲೇ ಯುಎಇನಲ್ಲಿ ಐಪಿಎಲ್ ಫ್ರಾಂಚೈಸಿಗಳು ತಂಗಿರುವ ಹೊಟೇಲ್‍ಗಳ ಸುತ್ತಮುತ್ತ ಮತ್ತು ಮೂರು ಕ್ರೀಡಾಂಗಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿ ಓಡಾಡಲು ಯಾರಿಗೂ ಅವಕಾಶವನ್ನು ಸಹ ನೀಡುತ್ತಿಲ್ಲ.








