ಬೆಂಗಳೂರು: ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಇಂದು ಸಿಎಂ ಯಡಿಯೂರಪ್ಪ ವೈದ್ಯಕೀಯ ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಕೋವಿಡ್ ಚಿಕಿತ್ಸೆ ಹಾಗೂ ನಿರ್ವಹಣೆಗೆ ಅಳವಡಿಸಬೇಕಾದ ಮಾರ್ಗಸೂಚಿಗಳನ್ನು ನಿಗದಿ ಪಡಿಸುವ ಕುರಿತು ಚರ್ಚಿಸಲಾಗಿದೆ. ರೋಗಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್) ಮಾಡಿ ಚಿಕಿತ್ಸೆ ನೀಡಲು ಸಲಹೆ ಬಂದಿದೆ.
ಮನೆಯಲ್ಲಿ ಚಿಕಿತ್ಸೆ ಪಡೆಯುವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಮುಚ್ಚಿದ ಸ್ಥಳಗಳು, ನಿಕಟ ಸಂಪರ್ಕ ಹಾಗೂ ಜನಸಂದಣಿಯ ಸ್ಥಳಗಳಲ್ಲಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಟೆಲಿಮೆಡಿಸಿನ್ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಸೋಂಕಿತರ ಸಂಪರ್ಕ ಪತ್ತೆ ಹಚ್ಚಲು ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದೆ. ಇತರೆ ಇಲಾಖೆಯ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು ಎಂಬ ಸಲಹೆಯೂ ಬಂದಿದೆ.
ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯವಾಗಿ ಬೇಕಿದೆ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು. ರಾಜ್ಯದಲ್ಲಿ ಕೋವಿಡ್ ಕುರಿತು ಭೀತಿಯ ವಾತಾವರಣ ಸೃಷ್ಟಿಯಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ. ತಜ್ಞರ ಈ ಅಭಿಪ್ರಾಯಗಳ ಕುರಿತು ಸರ್ಕಾರದ ಹಂತದಲ್ಲಿ ವಿವರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ








