ಹಿಮಾಚಲ ಪ್ರದೇಶ, ಜೂನ್ 6 : ಇತ್ತೀಚೆಗಷ್ಟೇ ಕೆಲವು ದುಷ್ಕರ್ಮಿಗಳು ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದಕ್ಕೆ ಸ್ಫೋಟಕ ತಿನ್ನಿಸಿ ಅದರ ಸಾವಿಗೆ ಕಾರಣರಾಗಿದ್ದರು. ಈ ಘಟನೆ ನೆನಪಿನಿಂದ ಮಾಸುವ ಮೊದಲೇ ಅಂತಹುದೇ ಮತ್ತೊಂದು ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಜಾಂಡುಟ್ಟಾ ಪ್ರದೇಶದಲ್ಲಿ ದುಷ್ಟರು ಗರ್ಭಿಣಿ ಹಸುವೊಂದಕ್ಕೆ ಆಹಾರದ ಚೆಂಡನ್ನು ತಯಾರಿಸಿ ಅದರ ಒಳಗೆ ಸ್ಫೋಟಕಗಳನ್ನಿಟ್ಟು ತಿನ್ನಿಸಿದ್ದಾರೆ. ಸ್ಫೋಟಕ ಹಸುವಿನ ಬಾಯಿಯಲ್ಲಿ ಸ್ಫೋಟಗೊಂಡಿದ್ದು, ಹಸು ತೀವ್ರವಾಗಿ ಗಾಯಗೊಂಡಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಅನ್ನು ಹಸುವಿನ ಮಾಲೀಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ನಂತರ ಜಾಂಡುಟ್ಟಾ ಪ್ರದೇಶದಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಕೇರಳದ ಮಲಪ್ಪುರಂನಲ್ಲಿ ಕಿಡಿಗೇಡಿಗಳು ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಸ್ಫೋಟಕಗಳನ್ನು ಇರಿಸಿ ಸೇವಿಸಲು ನೀಡಿದ್ದರು. ಆಹಾರ ಆನೆಯ ಬಾಯಿಯಲ್ಲಿ ಸ್ಪೋಟಗೊಂಡ ಪರಿಣಾಮ ಆನೆಯ ಬಾಯಿ ಮತ್ತು ದವಡೆಗೆ ತೀವ್ರವಾಗಿ ಗಾಯಗಳಾಗಿ ನೋವಿನಿಂದ ಏನೂ ತಿನ್ನಲು ಸಾಧ್ಯವಾಗಿರಲಿಲ್ಲ. ಕೊನೆಗೆ ನೋವಿನಿಂದ ಪಾರಾಗಲು ವೆಲಿಯಾರ್ ನದಿಯಲ್ಲಿ ಮೂರು ದಿನಗಳ ಕಾಲ ತನ್ನ ಮುಖವನ್ನು ಮುಳುಗಿಸಿ ನಿಂತಲ್ಲೇ ಕೊನೆಯುಸಿರೆಳೆದಿತ್ತು. ಈ ಘಟನೆಯ ಬಳಿಕ ದುಷ್ಕರ್ಮಿಗಳ ಕೃತ್ಯಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿತ್ತು ಮತ್ತು ಪ್ರಕರಣದ ಸಂಪೂರ್ಣ ತನಿಖೆಗೆ ಕೇರಳ ಸರ್ಕಾರ ಆದೇಶಿಸಿತ್ತು.








