ಭಾರತದ ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಕದಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚು ನಡೆಯುತ್ತಿದೆಯೇ ಎಂಬ ಸಂಶಯಕ್ಕೆ ಈಗ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಅವರ ಹೇಳಿಕೆ ಪುಷ್ಠಿ ನೀಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿಯ ಸದ್ದಿನ ಹಿಂದೆ ಅಮೆರಿಕದ ಕೆಲವು ದಾನಿಗಳ ಕಪ್ಪುಕೈಗಳಿವೆ ಎಂಬ ಸ್ಫೋಟಕ ಮಾಹಿತಿಯನ್ನು ಅವರು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.
ಅಮೆರಿಕದ ದಾನಿಗಳ ಪಿತೂರಿ ಬಯಲು
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಮೇರಿ ಮಿಲ್ಬೆನ್ ಭಾರತದಂತಹ ಬೆಳೆಯುತ್ತಿರುವ ದೇಶಗಳನ್ನು ಗುರಿಯಾಗಿಸಿಕೊಂಡು ಕೆಲವು ವಿದೇಶಿ ದಾನಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಜಾಗತಿಕವಾಗಿ ಸಂಪ್ರದಾಯವಾದಿ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲು ಇವರು ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತಾರೆ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ಯುವಕರನ್ನು ಹುಡುಕಿ ಅವರಿಗೆ ವ್ಯವಸ್ಥಿತವಾಗಿ ಬ್ರೇನ್ ವಾಶ್ ಮಾಡಲಾಗುತ್ತದೆ. ನಂತರ ಅವರನ್ನು ಸ್ವದೇಶಕ್ಕೆ ಕಳುಹಿಸಿ ಅಲ್ಲಿನ ಆಡಳಿತದ ವಿರುದ್ಧ ದಂಗೆ ಎಬ್ಬಿಸಲು ಭಾರಿ ಪ್ರಮಾಣದ ಹಣವನ್ನು ಒದಗಿಸಲಾಗುತ್ತದೆ ಎಂದು ಮಿಲ್ಬೆನ್ ಗಂಭೀರವಾಗಿ ಆರೋಪಿಸಿದ್ದಾರೆ.
ದೀಪ್ಕೆ ಮತ್ತು ಬಾಸ್ಟನ್ ಕನೆಕ್ಷನ್
ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ನೇರವಾಗಿಯೇ ಗುರಿಯಾಗಿಸಿರುವ ಮಿಲ್ಬೆನ್ ಅವರು ಅಮೆರಿಕದ ಪ್ರತಿಷ್ಠಿತ ಬಾಸ್ಟನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದವರು ಎಂಬುದನ್ನು ನೆನಪಿಸಿದ್ದಾರೆ. ವಿದೇಶಿ ಶಿಕ್ಷಣದ ಹೆಸರಿನಲ್ಲಿ ತೀವ್ರಗಾಮಿ ಆಲೋಚನೆಗಳನ್ನು ತುಂಬಿಕೊಂಡು ಬಂದಿರುವ ಇಂತಹ ವ್ಯಕ್ತಿಗಳು ದೇಶದ ಅಭಿವೃದ್ಧಿಗೆ ಕುತ್ತು ತರುತ್ತಿದ್ದಾರೆ. ಭಾರತದ ಮಣ್ಣಿನಲ್ಲೇ ಹುಟ್ಟಿ ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವ ಯುವಕರು ಇಂತಹ ವಿನಾಶಕಾರಿ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದ್ದಾರೆ.
ಮೋದಿಯವರ ನಾಯಕತ್ವಕ್ಕೆ ಅಚಲ ಬೆಂಬಲ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಅಪಾರ ಗೌರವ ಹೊಂದಿರುವ ಮೇರಿ ಮಿಲ್ಬೆನ್ ಭಾರತದ ಉಜ್ವಲ ಭವಿಷ್ಯವನ್ನು ತಡೆಯಲು ವಿದೇಶಿ ಶಕ್ತಿಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ 25 ವರ್ಷಗಳಿಂದ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಸತತ ಮೂರು ಬಾರಿ ಆಯ್ಕೆಯಾಗಿರುವ ಪ್ರಧಾನಿ ಮೋದಿ ಅವರು ಅಮೆರಿಕದ ಇಂತಹ ವಿನಾಶಕಾರಿ ಶಕ್ತಿಗಳಿಗೆ ಎಂದಿಗೂ ತಲೆಬಾಗುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತೀಯ ಯುವ ದೇಶಭಕ್ತರು ಯಾವುದಕ್ಕೂ ಹೆದರದೆ ಸತ್ಯದ ಪರವಾಗಿ ನಿಲ್ಲಬೇಕು ಎಂದು ಅವರು ಧೈರ್ಯ ತುಂಬಿದ್ದಾರೆ.
ಇದು ಮೌನವಾಗಿ ಕೂರುವ ಸಮಯವಲ್ಲ
ಭಾರತದ ಆಡಳಿತ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ವಿದೇಶಿ ಹಿತಾಸಕ್ತಿಗಳ ವಿರುದ್ಧ ಭಾರತೀಯರು ಒಗ್ಗೂಡಬೇಕು ಎಂದು ಮಿಲ್ಬೆನ್ ಮನವಿ ಮಾಡಿದ್ದಾರೆ. ಕಾಕ್ರೋಚ್ ಪಾರ್ಟಿಯಂತಹ ನಕಾರಾತ್ಮಕ ಶಕ್ತಿಗಳ ವಿರುದ್ಧ ಶಾಂತಿಯುತವಾಗಿ ಪ್ರತಿರೋಧದ ಚಳವಳಿ ನಡೆಸಬೇಕು. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಯುವಕರು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತದ ರಾಷ್ಟ್ರಗೀತೆಯನ್ನು ಹಾಡಿ ಇಡೀ ವಿಶ್ವದ ಗಮನ ಸೆಳೆದಿದ್ದ ಮೇರಿ ಮಿಲ್ಬೆನ್ ಅವರ ಈ ಸ್ಫೋಟಕ ಹೇಳಿಕೆ ಈಗ ಸಿಜೆಪಿ ಮತ್ತು ವಿರೋಧ ಪಕ್ಷಗಳ ಪಾಲಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಪ್ರತಿಭಟನೆಯ ಹಿಂದೆ ವಿದೇಶಿ ಹಣ ಹರಿದುಬರುತ್ತಿದೆ ಎಂಬ ಈ ಆರೋಪ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.







