ಬೆಂಗಳೂರು : ನಗರದ ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣದಲ್ಲಿ ಬಂಧಿತರಾಗಿರುವ 40ಕ್ಕೂ ಹೆಚ್ಚು ಮಂದಿಗೆ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂದು ಸಿಸಿಬಿಯ ಟೆಕ್ನಿಕಲ್ ತನಿಖೆಯಲ್ಲಿ ಸತ್ಯ ಬಯಲಾಗಿದೆ.
ಬಂಧಿತರಲ್ಲಿ ಕೆಲವರು ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ನಡೆದಿದ್ದ ಬಾಂಬ್ ಸ್ಫೋಟ. ಆರ್ಎಸ್ಎಸ್ ಮುಖಂಡ ರುದ್ರೇಶ್ ಹತ್ಯೆಯಲ್ಲಿ ಭಾಗಿ ಆಗಿರುವ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಸಾಕ್ಷ್ಯ ಲಭ್ಯವಾಗಿದೆ. ಬಂಧಿತರಲ್ಲಿ ಒಬ್ಬರಾದ ಸಮಿಯುದ್ದೀನ್, ಕೆಲ ದಿನಗಳ ಹಿಂದೆ ಜೈಲಿನಲ್ಲಿ ರುದ್ರೇಶ್ ಹತ್ಯೆ ಆರೋಪಿಗಳನ್ನ ಭೇಟಿಯಾಗಿದ್ದನು. ಈತನಿಗೆ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಅಲ್ ಹಿಂದ್ ಜೊತೆಗೆ ನಂಟಿತ್ತು ಎಂದು ಮೂಲಗಳು ತಿಳಿಸಿವೆ.
ಇನ್ನು ಟೆಕ್ನಿಕಲ್ ತನಿಖೆ ವೇಳೆ ಕೆಲ ಗಲಭೆಕೋರರು, ವಿಸಿಟರ್ ನೆಪದಲ್ಲಿ ಜೈಲಿನಲ್ಲಿರುವ ವಿವಿಧ ಉಗ್ರರರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗಲಭೆ ವೇಳೆಯ ಕೆಲ ಆರೋಪಿಗಳ ವಿಡಿಯೋಗಳು ಮತ್ತು ಜೈಲಿನಲ್ಲಿ ಆರೋಪಿಗಳನ್ನು ಭೇಟಿ ಮಾಡೋಕೆ ಹೋದ ವೇಳೆ ಅಲ್ಲಿನ ಸಿಸಿಟಿವಿಯ ದೃಶ್ಯಗಳು ಹೋಲಿಕೆಯಾಗಿವೆ ಎಂದು ಮಾಹಿತಿ ಲಭ್ಯವಾಗಿದೆ.