ಮೈಸೂರು: ಮೈಸೂರು ದಸರಾ ಇನ್ನೇನು ಸಮೀಪಿಸುತ್ತಿದ್ದೆ. ಹಬ್ಬ ಆಚರಣೆಗೆ ಸರ್ಕಾರ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ.
ಜಿಲ್ಲೆಯ ಟಿ.ನರಸೀಪುರದ ( T.Narasipura) ಕೆಂಪಯ್ಯನಹುಂಡಿ ಗೇಟ್ ಹತ್ತಿರ ಇರುವ ಹೋಟೆಲ್ ಹತ್ತಿರ 10 ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಸ್ಫೋಟಕ ವಸ್ತುಗಳನ್ನು ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟು ಹೋಗಿದ್ದರು. ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ನೋಡಿದಾಗ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಹೋಟೆಲ್ ಸಿಬ್ಬಂದಿ ಪ್ಲಾಸ್ಟಿಕ್ ಕವರ್ ನ್ನು ಪಕ್ಕದಲ್ಲಿರುವ ಮರಕ್ಕೆ ನೇತು ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಭೇಟಿ ನೀಡಿ ಸ್ಫೋಟಕಗಳಿದ್ದ ಕವರ್ ನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ. ಕಲ್ಲು ಗಣಿಗಾರಿಕೆಗೆ ಹಾಗೂ ನಾಡ ಬಾಂಬ್ ಕಾಡು ಪ್ರಾಣಿಗಳ ಬೇಟೆಗೆ ಬಳಕೆಗೆ ಬಳಸಲಾಗುವ ವಸ್ತುಗಳಂತೆ ಇವು ಕಂಡಿವೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








