ಜನರಲ್ ಬಿಪಿನ್ ರಾವತ್ ಸಹೋದರ ವಿಜಯ್ ರಾವತ್ ಬಿಜೆಪಿ ಸೇರ್ಪಡೆ..
ಭಾರತದ ದಿವಂಗತ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಸಹೋದರ ಕರ್ನಲ್ (ನಿವೃತ್ತ) ವಿಜಯ್ ರಾವತ್ ಅವರು ಬುಧವಾರ ದೆಹಲಿಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಪಕ್ಷದ ಇತರ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.
ನಿವೃತ್ತ ಕರ್ನಲ್ ವಿಜಯ್ ರಾವತ್ ದೆಹಲಿಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿಯನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಗುಡ್ಡಗಾಡು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಸರಿ ಪಾಳಯ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ.
ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ, ರಾವತ್ ಅವರು ಪ್ರಧಾನಿ ನರೇಂದ್ರ ಮೋದಿಯವರ “ದೂರದೃಷ್ಟಿ ಮತ್ತು ದೂರಗಾಮಿ ಚಿಂತನೆಯ ಪ್ರಕ್ರಿಯೆ” ಅವರು ಮತ್ತು ಇತರರನ್ನು ರಾಷ್ಟ್ರಕ್ಕಾಗಿ ಶ್ರಮಿಸಲು ಪ್ರೇರೇಪಿಸಿದ್ದಾರೆ ಎಮದು ಹೇಳಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಕರ್ನಲ್, “ಬಿಜೆಪಿಗೆ ಸೇರಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು. “ನನ್ನ ತಂದೆ ನಿವೃತ್ತಿಯ ನಂತರ ಬಿಜೆಪಿಯಲ್ಲಿದ್ದರು ಮತ್ತು ಈಗ ನನಗೆ ಅದೇ ಅವಕಾಶ ಸಿಕ್ಕಿದೆ.”
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.








