ತನ್ನ ಉದ್ಯೋಗಿಗಳಿಗೆ 2021 ರ ಮಧ್ಯಭಾಗದವರೆಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದ ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ, ಅಗಸ್ಟ್ 8: ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ 2021 ರ ಮಧ್ಯಭಾಗದವರೆಗೆ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಜೊತೆಗೆ ಗೃಹ ಕಚೇರಿಗೆ ಸಾಮಗ್ರಿಗಳನ್ನು ಖರೀದಿಸಲು ಪ್ರತಿ ಉದ್ಯೋಗಿಗೆ ಹೆಚ್ಚುವರಿಯಾಗಿ 1,000 ಡಾಲರ್ಗಳನ್ನು ನೀಡುವುದಾಗಿ ಘೋಷಿಸಿದೆ.
ಜಗತ್ತಿನಾದ್ಯಂತ ಫೇಸ್ಬುಕ್ನಲ್ಲಿ 48,000 ಉದ್ಯೋಗಿಗಳಿದ್ದಾರೆ. ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಈ ಹಿಂದೆ 2020 ರ ಅಂತ್ಯದ ವೇಳೆಗೆ ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿತ್ತು.
ಆರೋಗ್ಯ ಮತ್ತು ಸರ್ಕಾರಿ ತಜ್ಞರ ಮಾರ್ಗದರ್ಶನದ ಆಧಾರದ ಮೇಲೆ, ಈ ವಿಷಯಗಳ ಬಗ್ಗೆ ನಮ್ಮ ಆಂತರಿಕ ಚರ್ಚೆಗಳಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಜುಲೈ 2021ರವರೆಗೆ ಉದ್ಯೋಗಿಗಳಿಗೆ ಮನೆಯಿಂದ ಸ್ವಯಂಪ್ರೇರಣೆಯಿಂದ ಕೆಲಸ ಮಾಡಲು ನಾವು ಅವಕಾಶ ನೀಡುತ್ತಿದ್ದೇವೆ ಎಂದು ಫೇಸ್ಬುಕ್ ವಕ್ತಾರೆ ನೆನೆಕಾ ನಾರ್ವಿಲ್ಲೆ ಹೇಳಿದ್ದಾರೆ.
ಇದಲ್ಲದೆ, ನಾವು ಗೃಹ ಕಚೇರಿ ಅಗತ್ಯಗಳಿಗಾಗಿ ನೌಕರರಿಗೆ ಹೆಚ್ಚುವರಿ 1,000 ಡಾಲರ್ಗಳನ್ನು ನೀಡುತ್ತಿದ್ದೇವೆ ಎಂದು ವಕ್ತಾರೆ ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕವು ನಿಧಾನಗೊಳ್ಳುವ ಯಾವುದೇ ಲಕ್ಷಣವನ್ನು ತೋರಿಸದ ಕಾರಣ, ಗೂಗಲ್ ಕಳೆದ ತಿಂಗಳು ತನ್ನ ಸುಮಾರು 2 ಲಕ್ಷ ಉದ್ಯೋಗಿಗಳಿಗೆ ಅವರು ಇಚ್ಛೆ ಪಟ್ಟರೆ ಮುಂದಿನ ವರ್ಷದ ಮಧ್ಯದವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದಾಗಿ ಹೇಳಿದೆ.
ಉದ್ಯೋಗಿಗಳಿಗೆ ಕಛೇರಿ ಕೆಲಸವನ್ನು ಮನೆಯಿಂದಲೇ ಮಾಡುವ ಅವಕಾಶವನ್ನು ಜೂನ್ 30, 2021 ರವರೆಗೆ ವಿಸ್ತರಿಸುತ್ತಿದ್ದೇವೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ತಮ್ಮ ಇಮೇಲ್ ನಲ್ಲಿ ತಿಳಿಸಿದ್ದಾರೆ.
ಗೂಗಲ್ ಈ ಮೊದಲು ಜನವರಿ 2021 ಅನ್ನು ತನ್ನ ಕಾರ್ಮಿಕರಿಗೆ ಕಚೇರಿಗಳಿಗೆ ಮರಳಲು ತಾತ್ಕಾಲಿಕ ಟೈಮ್ಲೈನ್ ಆಗಿ ನಿಗದಿಪಡಿಸಿತ್ತು. ಟ್ವಿಟರ್ ಕೂಡ ನೌಕರರು ಬಯಸಿದರೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.
ಮೇ ತಿಂಗಳಲ್ಲಿ, ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು 2030 ರ ವರೆಗೆ ತಮ್ಮ ಅರ್ಧದಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬಹುದು ಎಂದು ಯೋಜನೆಯನ್ನು ರೂಪಿಸಿತ್ತು. ಅವರ ಪ್ರಕಾರ, ಸುಮಾರು ಅರ್ಧದಷ್ಟು ಫೇಸ್ಬುಕ್ ಉದ್ಯೋಗಿಗಳು ಈಗಿನಿಂದ 5 ರಿಂದ 10 ವರ್ಷಗಳವರೆಗೆ ಮನೆಯಿಂದ ಕೆಲಸ ಮಾಡುತ್ತಾರೆ.
ಅಮೆಜಾನ್ ಮತ್ತು ಆಪಲ್ ತಮ್ಮ ಉದ್ಯೋಗಿಗಳು ಜನವರಿಯಲ್ಲಿ ತಮ್ಮ ಕಚೇರಿಗಳಿಗೆ ಮರಳಬೇಕೆಂದು ನಿರೀಕ್ಷಿಸಿದರೆ, ಇತರ ಟೆಕ್ ಕಂಪನಿಗಳು ಸಹ ಮನೆಯಿಂದ ವರ್ಷದ ಅಂತ್ಯದವರೆಗೆ ಕೆಲಸ ಮಾಡುವ ಭರವಸೆ ನೀಡಿವೆ.