ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಎಚ್ಚರಿಕೆ ಕೊಟ್ಟ ಫೇಸ್‌ಬುಕ್
ವಾಷಿಂಗ್ಟನ್, ಅಗಸ್ಟ್ 20: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಟ್ರಂಪ್ ಗೆ ಫೇಸ್‌ಬುಕ್ ನೇರ ಎಚ್ಚರಿಕೆ ನೀಡಿದೆ.
ಫೇಸ್‌ಬುಕ್ ಸಂಸ್ಥೆಯ ನಿಯಮಗಳನ್ನು ಮೀರಿದರೆ ಅಂತಹ ಹೇಳಿಕೆಗಳನ್ನು ತಾಣದಿಂದ ತೆಗೆದುಹಾಕಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಎಚ್ಚರಿಕೆ ನೀಡಿದೆ.
ದ್ವೇಷ ಹಬ್ಬಿಸುವುದಾಗಲಿ ಅಥವಾ ಸುಳ್ಳು ಸುದ್ದಿಗಳನ್ನು ಹರಡುವುದಾಗಲಿ ಅಥವಾ ಕೋವಿಡ್ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಅಂತಹ ಪೋಸ್ಟ್ ಕಂಡು ಬಂದರೆ ಅದನ್ನು ಮುಲಾಜಿಲ್ಲದೆ ಅಳಿಸಲಾಗುವುದು ಎಂದು ಹೇಳಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್ ಬುಕ್ ಕಠಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಸಾರ್ವಜನಿಕರಲ್ಲಿನ ಚುನಾವಣೆಗೆ ಸಂಬಂಧಿಸಿದ ಗೊಂದಲಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಫೇಸ್‌ಬುಕ್ ಕಳೆದ ವಾರ ಮತದಾನ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿತ್ತು. ಇದು ಅಮೆರಿಕನ್ನರಿಗೆ ಮತದಾನದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ. ಅಷ್ಟೇ ಅಲ್ಲ ಈ ಕೇಂದ್ರಗಳು ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಕೂಡ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್-ಬುಕ್ನ ವಕ್ತಾರರು ಫೇಸ್‌ಬುಕ್ ಅಥವಾ ವಾಟ್ಸ್ಆಯಪ್ನಲ್ಲಿ ದ್ವೇಷ ಹಬ್ಬಿಸಲಾಗಲೀ, ಸುಳ್ಳು ಸುದ್ದಿಗಳನ್ನು ಹರಡಿಸುವುದಕ್ಕೆ ಆಗಲಿ ಅವಕಾಶ ನೀಡುವುದಿಲ್ಲ. ಅದು ಯಾವುದೇ ಪಕ್ಷವಾಗಿರಲಿ, ಪಕ್ಷದ ರಾಜಕಾರಣಿಯಾಗಿರಲಿ ಸುಳ್ಳು ಸುದ್ದಿ, ದ್ವೇಷ ಹಂಚಲು ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.