ಫೇಸ್‌ಬುಕ್ ಮತ್ತು ವಾಟ್ಸಾಪ್ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಿಯಂತ್ರಣದಲ್ಲಿದೆ- ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದ ರವಿಶಂಕರ್ ಪ್ರಸಾದ್
ಹೊಸದಿಲ್ಲಿ, ಅಗಸ್ಟ್ 17: ಬಿಜೆಪಿ ಪಕ್ಷ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾನುವಾರ ತಿರುಗೇಟು ನೀಡಿದ್ದಾರೆ.
ತಮ್ಮ ಪಕ್ಷದಲ್ಲಿರುವ ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೇ ಸೋತವರು, ಇಡೀ ಜಗತ್ತನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಿಯಂತ್ರಿಸುತ್ತಿದೆ ಎಂದುಕೊಳ್ಳುತ್ತಾರೆ ಎಂದು ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಚುನಾವಣೆಗೆ ಮುಂಚಿತವಾಗಿ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಫೇಸ್‌ಬುಕ್‌ನೊಂದಿಗಿನ ಮೈತ್ರಿಯಲ್ಲಿ ಮಾಹಿತಿ ಸಂಗ್ರಹಿಸಲು ಹೋಗಿ ನೀವು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೀರಿ ಮತ್ತು ಈಗ ನಮ್ಮನ್ನು ಪ್ರಶ್ನಿಸುತ್ತಿದ್ದೀರಾ ಎಂದು ಪ್ರಸಾದ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಅನ್ನು ಉಲ್ಲೇಖಿಸಿ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ, ಇದರಲ್ಲಿ ಕೇಂದ್ರವು ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ಭಾರತದಲ್ಲಿ ನಕಲಿ ಸುದ್ದಿ ಮತ್ತು ದ್ವೇಷವನ್ನು ಹರಡಿದೆ ಎಂದು ರಾಹುಲ್ ಆರೋಪಿಸಿದ್ದರು.

ಅಮೆರಿಕದ, ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್ಜೆ) ಯ ವರದಿಯು ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಗುಂಪುಗಳಿಗೆ ದ್ವೇಷಕಾರುವ ಹೇಳಿಕೆಗಳ ವಿರುದ್ಧ ನಿಯಮವನ್ನು ಅನ್ವಯಿಸಲು ಹಿಂಜರಿಯುತ್ತಿದೆ ಎಂದು ಆರೋಪಿಸಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವರದಿಯನ್ನು ಪ್ರಸ್ತಾಪಿಸಿ, ಭಾರತದಲ್ಲಿ ದ್ವೇಷಕಾರುವ ಹೇಳಿಕೆಗಳ ನಿಯಮವನ್ನು ಬಿಜೆಪಿ ನಾಯಕರ ವಿರುದ್ಧ ಜಾರಿಗೊಳಿಸಲು ಫೇಸ್ಬುಕ್ ಹಿಂಜರಿಯುತ್ತಿದೆ. ಫೇಸ್ಬುಕ್ ಹಾಗೂ ವಾಟ್ಸ್ಯಾಪ್ ಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದರು.








