ಬೆಂಗಳೂರು: ಕರ್ನಾಟಕ ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಆಗಿದ್ದು ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಐಪಿಎಸ್ ಅಧಿಕಾರಿಗಳ ತಿಕ್ಕಾಟವನ್ನು ನಿರ್ವಹಿಸಲು ವಿಫಲವಾಗಿದ್ದು ರಾಜ್ಯದ ಜನತೆಗೆ ಮನರಂಜನೆ ಒದಗಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.
ಲೋಕಾಯುಕ್ತ ಪ್ರಕರಣದಲ್ಲಿ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಕೃಪೆ ಅನಿವಾರ್ಯವಾಗಿದೆ.
ರಾಜ್ಯದ ಆಡಳಿತ ಯಂತ್ರದ ಮೇಲೆ ಹಿಡಿತ ಕಳೆದುಕೊಂಡ ಸಿಎಂ ಯಡಿಯೂರಪ್ಪ, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಬಹಿರಂಗ ಹೇಳಿಕೆಗಳ ಮೂಲಕ ಬೀದಿ ಜಗಳ ಮಾಡಲು ಅವಕಾಶ ನೀಡಿದ್ದಾರೆ. ಭ್ರಷ್ಟಾಚಾರ ಆರೋಪದ ಮೇಲೆ ಈ ರೀತಿ ಐಪಿಎಸ್ ಅಧಿಕಾರಿಗಳು ಬಹಿರಂಗವಾಗಿ ಕಾಳಗ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
ರಾಜ್ಯದ ಸರ್ಕಾರಿ ನೌಕರರ ಮತ್ತು ಐಎಎಸ್/ಐಪಿಎಸ್ ಅಧಿಕಾರಿಗಳ ಸೇವಾ ನಿಯಮಗಳನ್ನು ಗಾಳಿಗೆ ತೂರಿ ಇಬ್ಬರು ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಬರಿದೆ ಪತ್ರಗಳನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಮತ್ತು ಮುಖ್ಯ ಕಾರ್ಯದರ್ಶಿಗಳ ವೈಫಲ್ಯವೇ ಐಪಿಎಸ್ ಅಧಿಕಾರಿಗಳ ಜಗಳ ಬೀದಿಗೆ ಬರಲು ಕಾರಣವಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಕೋವಿಡ್ ಚಿಕಿತ್ಸೆಯಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಶೋಷಣೆ ತಪ್ಪಿಸಲು ವಿಫಲವಾಗಿರುವ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್, ಆಸ್ಪತ್ರೆಗಳ ಆಡಳಿತ ಮಂಡಳಿ ಜೊತೆ ರಾಜಿ ಸಂಧಾನ ಮಾಡುತ್ತಿರುವುದು ದಂಧೆಯ ಸಂಕೇತವಲ್ಲವೇ? ರೋಗಿಗಳಿಂದ ಹೆಚ್ಚು ಹಣ ಪೀಕುತ್ತಿರುವ ಆಸ್ಪತ್ರೆಗಳ ಮೇಲೆ ಪ್ರಕರಣ ದಾಕಲಾಗುತ್ತಿಲ್ಲ ಏಕೆ?
ಕೊರೊನಾ ಹಿನ್ನೆಲೆಯಲ್ಲಿ ಸ್ಪಷ್ಟ ಮಾಹಿತಿ ಇಲ್ಲದೆ ರಾತ್ರಿ ಕಪ್ರ್ಯು ಹೇರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಸಚಿವರಾಗಿ ಉತ್ತರ ಕೊಡದೆ ಕೆಳ ಮಟ್ಟದ ಟೀಕೆ ಮಾಡುತ್ತಾರೆ. ಕೋವಿಡ್ ಹೆಸರಿನಲ್ಲಿ ಕೋವಿಡ್ ಸಮಯದಲ್ಲಿ ದಂಧೆ ಮಾಡುವಲ್ಲಿ ಪರಿಣಿತಿ ಪಡಿದಿರುವ ಸುಧಾಕರ್ರನ್ನು ಅದೇ ಕಾರಣಕ್ಕಾಗಿ ಬಿಜೆಪಿ ಹೈದರಾಬಾದ್ ಪಾಲಿಕೆಯ ಚುನಾವಣೆಗೆ ಬಳಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಘಟಕ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ವಿಶ್ವವಿದ್ಯಾಲಯ ತೆರೆಯುವ ಉದ್ದೇಶ ಇದ್ದರೆ ಇವರನ್ನೇ ಕುಲಪತಿಯಾಗಿ ನೇಮಿಸಲಿ ಅಥವಾ ಆ ವಿಶ್ವವಿದ್ಯಾಲಯದ ಪ್ರವರ್ತಕರನ್ನಾಗಿ ನೇಮಿಸಲಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮಂತ್ರಿಗಳ ಮೇಲೆ ಹಿಡಿತ ಕಳೆದುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಈಗ ರಾಜ್ಯದ ಅಧಿಕಾರಿಗಳ ಮೇಲೂ ಹಿಡಿತ ಕಳೆದುಕೊಂಡಿದ್ದಾರೆ. ಮಾಧ್ಯಮಗಳ ಮೂಲಕ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಶಾಮೀಲು ಕುರಿತು ಚರ್ಚೆ ನಡೆಯುತ್ತಿದೆ. ಲಂಚದ ಆರೋಪ ಬಂದ ಅಬಕಾರಿ ಸಚಿವರ ತೆಗೆಯಲು ಬಿಜೆಪಿ ವಿಫಲವಾಗಿದೆ. ರಾಜ್ಯದ ಮುಖ್ಯಮಂತ್ರಿ ಮೇಲೆ ಅಕ್ರಮ ಡಿನೋಟಿಫಿಕೇಶನ್ ಹೆಸರಿನಲ್ಲಿ ಎಫ್ಐಆರ್ ಇರುವುದು ಇತರೆ ಮಂತ್ರಿಗಳು ಮತ್ತು ಅಧಿüಕಾರಿಗಳು ತಮ್ಮನ್ನು ತಾವು ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಅವಕಾಶ ನೀಡಿದೆ. ಪಾರ್ಟಿ ವಿಥ್ ಡಿಫರೆಂಟ್ ಎಂಬ ಬಿಜೆಪಿಯ ವಾಕ್ಯಕ್ಕೆ ಅಥವಾ ಹೇಳಿಕೆಗೆ ನಿಜ ಅರ್ಥ ಬರುತ್ತಿದೆ.
ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ, ಒಂದು ಪಕ್ಷವಾಗಿ ಬಿಜೆಪಿ ವಿಫಲವಾಗಿದ್ದು, ಹಿರಿಯ ಅಧಿಕಾರಿಗಳ ಜಗಳ ನಮ್ಮ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಹರಾಜಾಗುತ್ತಿದೆ. ಸಾಂವಿಧಾನಿಕ ಹುದ್ದೆ ಹೊಂದಿದವರು ಅದರ ನಿರ್ವಹಣೆಯಲ್ಲಿ ವೈಫಲ್ಯ ಕಂಡಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನೆಡೆಸುವ ನೈತಿಕ ಶಕ್ತಿ ಕಳೆದುಕೊಂಡಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel