ಅಮಿತಾಬ್ ಬಚ್ಚನ್ ಮನೆ, 3 ರೈಲು ನಿಲ್ದಾಣ ಸ್ಫೋಟಿಸುವ ಧಮ್ಕಿ : ಮುಂಬೈನಾದ್ಯಂತ ಹದ್ದಿನ ಕಣ್ಣಿಟ್ಟ ಪೊಲೀಸರು…!
ಮುಂಬೈ : ಇತ್ತೀಚೆಗೆ ಟಾಲಿವುಡ್ , ಕಾಲಿವುಡ್ ಸೇರಿ ಸಾಕಷ್ಟು ಸಿನಿಮಾರಂಗದ ಸ್ಟಾರ್ ನಟರಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿವೆ.. ಇದೀಗ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ನಿವಾಸ ಹಾಗೂ 3 ಪ್ರಮುಕ ರೈಲು ನಿಲ್ದಾಣಗಳಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಬೆದರಿಕೆ ಕರೆ ಬಂದಿದೆ.. ಈ ಹಿನ್ನಲೆಯಲ್ಲಿ ಮುಂಬೈನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ನಿನ್ನೆ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿದ ದುಷ್ಕರ್ಮಿಗಳು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಬೈಕುಲಾ ಹಾಗೂ ದಾದರ್ ರೈಲು ನಿಲ್ದಾಣ ಮತ್ತು ಜುಹುವಿನಲ್ಲಿರುವ ಬಿಗ್ಬಿ ಅಮಿತಾಬ್ ನಿವಾಸಗಳಲ್ಲಿ ಬಾಂಬ್ ಹುದುಗಿಸಿಟ್ಟಿರುವುದಾಗಿ ಬೆದರಿಕೆ ಹಾಕಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ರೈಲು ನಿಲ್ದಾಣಗಳು ಹಾಗೂ ಅಮಿತಾಬ್ ನಿವಾಸಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ದುಷ್ಕರ್ಮಿಗಳು ಮಾಡಿರುವುದು ಹುಸಿ ಕರೆ ಎನ್ನುವುದು ಗೊತ್ತಾಗಿದೆ.
ರೈಲ್ವೇ ಪೊಲೀಸರು, ರೈಲು ರಕ್ಷಣಾ ಪಡೆಗಳು, ಬಾಂಬ್ ನಿಷ್ಕ್ರೀಯ ದಳಗಳು ಹಾಗೂ ಶ್ವಾನದಳಗಳು ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಿದಾಗ ಬಾಂಬ್ ಗಳಿಲ್ಲದಿರುವುದು ಪತ್ತೆಯಾಗಿದೆ. ಆದರೂ ಹುಸಿ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.