ರಾಯಚೂರು: ಕುಡಿಯಲು ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳು ಮೃತಪಟ್ಟಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ.
ರೌಡಕುಂದಾ ಗ್ರಾಮದ ಗದುಗಿನ ಶೇಖರಪ್ಪ ಅವರ ಮೊಮ್ಮಕ್ಕಳಾದ 10 ವರ್ಷದ ನಾಗರಾಜ, 8 ವರ್ಷದ ಕಾರ್ತಿಕ್ ಹಾಗೂ 7 ವರ್ಷದ ರವಿಕುಮಾರ್ ಮೃತ ದುರ್ದೈವಿಗಳಾಗಿದ್ದಾರೆ. ಗ್ರಾಮದ ಹೊರ ವಲಯದಲ್ಲಿನ ಕೆರೆಯಲ್ಲಿ ನೀರು ತರಲು ಹೋಗಿದ್ದ ಬಾಲಕರು ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾರೆ. ಇಂದು ಬೆಳಗಿನ ಜಾವ 7ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.








