ಕೋಲಾರ: ನವವಿವಾಹಿತೆಯೊಬ್ಬರು ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ನಡೆದಿದೆ.
ನಗರ ಹೊರವಲಯದ ಸಹಕಾರ ನಗರದಲ್ಲಿ ಈ ಘಟನೆ ನಡೆದಿದೆ. ಮಾನಸ (24) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಒಂದು ವರ್ಷದ ಹಿಂದೆ ತಾಲೂಕಿನ ತೂರಾಂಡಹಳ್ಳಿಯ ಉಲ್ಲಾಸ್ ಗೌಡ ಹಾಗೂ ಮಾನಸ ಮದುವೆ ಮಾಡಿಕೊಂಡಿದ್ದರು. ಉಲ್ಲಾಸ್ ಗೌಡ ಕುಟುಂಬಸ್ಥರು ಮಾನಸಳಿಗೆ ವರದಕ್ಷಿಣೆ ವಿಚಾರವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೌಟುಂಬಿಕ ಕಲಹದಿಂದಾಗಿ ದೊಡ್ಡವರ ಸಮ್ಮುಖದಲ್ಲಿ ಎರಡು ಮೂರು ಪಂಚಾಯಿತಿ ರಾಜೀ ಸಂದಾನಗಳನ್ನು ಮಾಡಲಾಗಿತ್ತು. ರಾಜಿ ಸಂಧಾನ ಸಫಲವಾಗದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ (Divorce) ಅರ್ಜಿ ಹಾಕಿಕೊಳ್ಳಲಾಗಿತ್ತು. ಪರಿಣಾಮ ಉಲ್ಲಾಸ್ ಗೌಡ ತನ್ನ ಪತ್ನಿ ಮಾನಸಳನ್ನು ತವರು ಮನೆಗೆ ಕಳುಹಿಸಿದ್ದ. ಉಲ್ಲಾಸ್ ಗೌಡ ವಿಚ್ಛೇದನ ಪಡೆದುಕೊಳ್ಳುವ ಉದ್ದೇಶದಿಂದ ನೋಟಿಸ್ ಸಹ ವಕೀಲರ ಕಡೆಯಿಂದ ಪತ್ನಿಯ ಮನೆಗೆ ಕಳುಹಿಸಿದ್ದ. ಹೀಗಾಗಿ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಾನಸ, ನನ್ನ ಸಾವಿಗೆ ಯಾರು ಕಾರಣರಲ್ಲ. ಉಲ್ಲಾಸ್ ಫ್ಯಾಮಿಲಿಯಿಂದ ಕಷ್ಟ ಆಗಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ಮರಳಿ ಕೊಡಿ ಎಂದು ಡೆತ್ನೋಟ್ (Deathnote) ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಘಟನಾ ಸ್ಥಳಕ್ಕೆ ಕೋಲಾರ (Kolara) ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ವರದಕ್ಷಿಣೆ ಕಿರುಕುಳ, ಅನುಮಾನಸ್ಪದ ಸಾವು ಹಾಗೂ ಡೆತ್ ನೋಟ್ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.