ಮುಂಬೈ, ಮೇ 26 : ಬಾಲಿವುಡ್ ನಟ ಸೋನು ಸೂದ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಜನರಿಗೆ ಆಹಾರ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮುಖಾಂತರ ಕೂಡ ಜನ ಸಹಾಯ ಕೇಳುತ್ತಿದ್ದು, ಅವರ ಸಹಾಯಕ್ಕೆ ಕೂಡ ಸೋನು ಸೂದ್ ಧಾವಿಸುತ್ತಿದ್ದಾರೆ. ಅದರಲ್ಲೂ ಟ್ವಿಟರ್ ಮೂಲಕ ಸಹಾಯ ಕೇಳುತ್ತಿರುವವರ ಸಂಖ್ಯೆ ಹೆಚ್ಚಿದೆ. ನಟ ಸೋನು ಸೂದ್ ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಹೀಗಿರುವಾಗ ನಟ ಸೋನು ಸೂದ್ ಅವರಿಗೆ ವ್ಯಕ್ತಿಯೊಬ್ಬ ಸೋನು ಸಹೋದರ, ನಾನು ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ವೈನ್ ಶಾಪ್ ಗೆ ತಲುಪಿಸುತ್ತೀರಾ ಎಂದು ಟ್ವೀಟ್ ಮಾಡಿ ಕೇಳಿದ್ದಾನೆ. ಇದಕ್ಕೆ ರೀಟ್ವೀಟ್ ಮಾಡಿರುವ ನಟ ಸೋನು ಸೂದ್, ಸಹೋದರ, ನಿನ್ನನ್ನು ವೈನ್ ಶಾಪ್ ನಿಂದ ಮನೆಗೆ ಬೇಕಾದರೆ ತಲುಪಿಸಬಲ್ಲೆ. ಅಗತ್ಯವಿದ್ದರೆ ಖಂಡಿತವಾಗಿ ಹೇಳು ಎಂದು ನಗುವ ಚಿಹ್ನೆ ಹಾಕಿ ಪ್ರತಿಕ್ರಿಯಿಸಿದ್ದಾರೆ. ಸೋನು ಸೂದ್ ಪ್ರತಿಕ್ರಿಯೆ ನೋಡಿ ಎಲ್ಲರೂ ನಗೆಗಡಲಲ್ಲಿ ತೇಲಿದ್ದು, ಸಾವಿರಾರು ಮಂದಿ ಅದನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಅನೇಕ ತಾರೆಯರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಹಲವು ರೀತಿಯ ಸಹಾಯ ಮಾಡುತ್ತಿದ್ದು, ಸೋನು ಖುದ್ದು ಮಾತ್ರ ತಾವೇ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡು ಶ್ರಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ನಟ ಸೋನು ಸೂದ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕಾರ್ಮಿಕ ತನ್ನ ಊರು ಸೇರುವವರೆಗೆ ತಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.








