ಸೋಮನಾಥ್ ಗಿರ್:ಮಗನ ಪ್ರಾಣಕ್ಕೆ ಕಂಟಕವಾಗಿ ಬಂದ ಮೃತ್ಯುವಿನಂತಿದ್ದ ಚಿರತೆಯ ಜೊತೆ ಬರಿಗೈಯಲ್ಲಿ ಸೆಣಸಾಡಿ, ಅಂತಿಮವಾಗಿ ಮಗನನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ವೃದ್ಧ ತಂದೆಯೊಬ್ಬರ ಸಾಹಸಗಾಥೆ ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ನಡೆದಿದೆ. ಆದರೆ, ವಿಧಿಯಾಟ ಎಂಬಂತೆ ತಮ್ಮ ಪ್ರಾಣ ರಕ್ಷಣೆಗಾಗಿ ಚಿರತೆಯನ್ನು ಕೊಂದ ಈ ಅಪ್ಪ-ಮಗನ ವಿರುದ್ಧವೇ ಇದೀಗ ಅರಣ್ಯ ಇಲಾಖೆ ಕೇಸ್ ದಾಖಲಿಸಿದ್ದು, ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕತ್ತಲೆಯಲ್ಲಿ ಎರಗಿದ ಚಿರತೆ – ನಡೆದಿದ್ದೇನು?
ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಅರಣ್ಯದಂಚಿನ ಗ್ರಾಮವೊಂದರಲ್ಲಿ ಬುಧವಾರ ಸಂಜೆ ಈ ಭಯಾನಕ ಘಟನೆ ನಡೆದಿದೆ. 60 ವರ್ಷದ ರೈತ ಬಾಬುಭಾಯ್ ನರನ್‌ಭಾಯ್ ವಜಾ ಎಂಬುವರು ತಮ್ಮ ಜಮೀನಿನ ಮನೆಯ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕತ್ತಲು ಆವರಿಸುತ್ತಿದ್ದಂತೆ ಅರಣ್ಯದಿಂದ ನಾಡಿಗೆ ನುಗ್ಗಿ ಬಂದ ಚಿರತೆಯೊಂದು ಹೊಂಚು ಹಾಕಿ ಕುಳಿತಿತ್ತು. ಏನೂ ಅರಿಯದ ಬಾಬುಭಾಯ್ ಅವರ ಮೇಲೆ ಚಿರತೆ ಏಕಾಏಕಿ ಎರಗಿದೆ. ಕತ್ತಲೆಯಲ್ಲಿ ಪ್ರಾಣಿಯ ದಾಳಿಯಿಂದ ತಲ್ಲಣಗೊಂಡ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ.
ತಂದೆಯ ಕೂಗು ಕೇಳಿ ಓಡಿಬಂದ ಮಗ
ತಂದೆಯ ಆರ್ತನಾದ ಕೇಳಿ ಮನೆಯೊಳಗಿದ್ದ 27 ವರ್ಷದ ಮಗ ಶಾರ್ದೂಲ್ ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿದ್ದ ತಂದೆಯನ್ನು ಕಂಡ ಮಗ ರಕ್ಷಣೆಗೆ ಮುಂದಾಗಿದ್ದಾರೆ. ಆಗ ಚಿರತೆ ತನ್ನ ಗಮನವನ್ನು ಬಾಬುಭಾಯ್ ಅವರಿಂದ ಶಾರ್ದೂಲ್ ಕಡೆಗೆ ತಿರುಗಿಸಿದೆ. ಕ್ಷಣಾರ್ಧದಲ್ಲಿ ಮಗನ ಮೇಲೆ ಚಿರತೆ ದಾಳಿ ಮಾಡಿ, ಕುತ್ತಿಗೆಗೆ ಬಾಯಿ ಹಾಕಲು ಯತ್ನಿಸಿದೆ.
ಮಗನಿಗಾಗಿ ಯಮನಾದ ಅಪ್ಪ
ತನ್ನ ಕಣ್ಣ ಮುಂದೆಯೇ ಮಗನನ್ನು ಚಿರತೆ ಕೊಂದು ಹಾಕಬಹುದು ಎಂಬ ಭೀತಿ ತಂದೆ ಬಾಬುಭಾಯ್ ಅವರನ್ನು ಆವರಿಸಿತು. ತಮಗಾದ ಗಾಯವನ್ನೂ ಲೆಕ್ಕಿಸದೆ, ಅಲ್ಲಿಯೇ ಇದ್ದ ಕೃಷಿ ಉಪಕರಣಗಳಾದ ಈಟಿ ಮತ್ತು ಕುಡುಗೋಲು ಹಿಡಿದು ಚಿರತೆಯ ಮೇಲೆ ಮುಗಿಬಿದ್ದಿದ್ದಾರೆ. ಮಗನನ್ನು ಚಿರತೆಯ ದವಡೆಯಿಂದ ಬಿಡಿಸಲು ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಈ ಭೀಕರ ಕಾಳಗದಲ್ಲಿ ಚಿರತೆ ಸಾವನ್ನಪ್ಪಿದೆ. ಅಂತಿಮವಾಗಿ ತಂದೆಯ ಪ್ರೀತಿ ಮತ್ತು ಸಾಹಸದ ಮುಂದೆ ಕ್ರೂರ ಪ್ರಾಣಿ ಸೋಲೊಪ್ಪಿಕೊಂಡಂತಾಗಿದೆ.
ಚಿರತೆಯ ದಾಳಿಯಿಂದ ಬಾಬುಭಾಯ್ ಮತ್ತು ಶಾರ್ದೂಲ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ತಸಿಕ್ತವಾಗಿದ್ದ ಇಬ್ಬರನ್ನೂ ಸ್ಥಳೀಯರು ತಕ್ಷಣವೇ ಉನಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಗಳು ಗಂಭೀರ ಸ್ವರೂಪದ್ದಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರೂ, ಚೇತರಿಸಿಕೊಳ್ಳಲು ಸಮಯ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜೀವ ಉಳಿಸಿಕೊಂಡವರ ವಿರುದ್ಧವೇ ಕೇಸ್!
ಘಟನೆಯ ನಂತರ ಬಾಬುಭಾಯ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಮೃತ ಚಿರತೆಯ ದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ, ಚಿರತೆಯನ್ನು ಕೊಲ್ಲಲು ಬಳಸಲಾದ ಈಟಿ ಮತ್ತು ಕುಡುಗೋಲನ್ನು ಜಪ್ತಿ ಮಾಡಿದ್ದಾರೆ.
ಆದರೆ, ಇಲ್ಲಿ ನಡೆದಿದ್ದು ಸ್ವರಕ್ಷಣೆಗಾಗಿ ನಡೆದ ಹೋರಾಟವಾದರೂ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆಯು ಬಾಬುಭಾಯ್ ಮತ್ತು ಅವರ ಮಗ ಶಾರ್ದೂಲ್ ವಿರುದ್ಧ ಚಿರತೆಯನ್ನು ಕೊಂದ ಆರೋಪದಡಿ ಪ್ರಕರಣ ದಾಖಲಿಸಿದೆ. ಜೀವ ಉಳಿಸಿಕೊಳ್ಳಲು ಮಾಡಿದ ಪ್ರತಿದಾಳಿಯನ್ನು ಅಪರಾಧವೆಂದು ಪರಿಗಣಿಸಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಬಹುದು. ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.
ಮಗನ ಪ್ರಾಣ ಉಳಿಸಲು ಚಿರತೆಯನ್ನೇ ಎದುರು ಹಾಕಿಕೊಂಡು ಗೆದ್ದ ತಂದೆ, ಇದೀಗ ಕಾನೂನಿನ ಕುಣಿಕೆಯನ್ನು ಎದುರಿಸಬೇಕಾದ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ.








