ಹಾವೇರಿ: ಕೆಲ ಕಿಡಿಗೇಡಿಗಳು ರೈತರನ್ನು ಯೋಜನೆಗಳ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರೈತರು ಇಲ್ಲಸಲ್ಲದ ವದಂತಿ ಸುಳ್ಳು-ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಕೃಷಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದರೆ ರೈತರ ಹೆಸರಿನಲ್ಲಿ ಕೆಲವರು ಅನವಶ್ಯಕ ಧರಣಿ ನಡೆಸುತ್ತಿರುವುದು ವಿಷಾಧನೀಯ ಎಂದರು.
ಹಿರೇಕೆರೂರಿನಿಂದ ಶಿಕಾರಿಪುರಕ್ಕೆ ಹೋಗುವ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆ ಪ್ರಗತಿಯಲ್ಲಿದೆ. ಹಿರೇಕೆರೂರಿನ ವರಹ ನಿಟ್ನೇಗಿಲು, ಬನ್ನಟ್ಟಿ, ಬಳ್ಳೂರು, ಚಿಕ್ಕೇರೂರು, ಯಲ್ಲಾಪುರ ಸೇರಿದಂತೆ ತಾಲೂಕಿನ ಏಳು ಕೆರೆಗಳು ಯೋಜನೆಯಿಂದ ತುಂಬುತ್ತವೆ. ಪೈಪ್ಲೈನ್ ಮೂಲಕ ನೀರು ಹಾಯಿಸಲಾಗುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ರೈತರ ಹೆಸರಿನಲ್ಲಿ ದುರುದ್ದೇಶಪೂರಕವಾಗಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಯಾವುದೇ ನೀರಾವರಿ ಯೋಜನೆ ಕಾರ್ಯಗತವಾಗಬೇಕಾದರೆ ಹಲವಾರು ಸ್ಥಳಗಳಿಂದ ಹಾದು ಹೋಗಬೇಕಾಗುತ್ತದೆ. ಜನರು ವಾಸ್ತವಾಂಶವನ್ನು ಅರಿಯಬೇಕು. ಅಲ್ಲದೇ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಿಂದ ರೈತರಿಗಾಗಲೀ ಜನರಿಗಾಗಲೀ ಯಾವುದೇ ತೊಂದರೆಯಾಗದು ಎಂದು ತಿಳಿಸಿದ್ದಾರೆ.
ಬೇರೆ ತಾಲೂಕಿನಿಂದ ಹಿರೇಕೆರೂರಿಗೆ ಮೂರು ಯೋಜನೆಗಳು ಬರುತ್ತಿವೆ. ವಿನಾಕಾರಣ ರೈತರನ್ನು ದಾರಿ ತಪ್ಪಿಸುವುದರಿಂದ ಯಾರಿಗೇನು ಲಾಭವಾಗುತ್ತಿದೆಯೋ ಗೊತ್ತಿಲ್ಲ. ನೀರಾವರಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇಂತಹವರ ಮಾತಿಗೆ ಅಪಪ್ರಚಾರಕ್ಕೆ ರೈತಬಾಂಧವರು ಯಾವುದೇ ಕಾರಣಕ್ಕೆ ಬೆಲೆಕೊಡಬಾರದು. ರೈತರಿಗೆ ಸರ್ಕಾರ ಯಾವುದೇ ರೀತಿ ಅನ್ಯಾಯ ಮಾಡುವುದಿಲ್ಲ. ವದಂತಿಗಳಿಗೆ ಕಿವಿಗೊಡಬಾರದೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ
ಸಿಎಂ ಬಿಎಸ್ವೈಗೆ ಬಿ.ಸಿ.ಪಾಟೀಲ್ ಅಭಿನಂದನೆ
ಹಿರೇಕೆರೂರು ಪಟ್ಟಣದಲ್ಲಿ ಪ್ರವಾಸಿಮಂದಿರ ನಿರ್ಮಾಣ ಕಾಮಗಾರಿಗೆ 3 ಕೋಟಿ, ಹಾಗೂ ರಟ್ಟಿಹಳ್ಳಿ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗೆ 2 ಕೋಟಿ ರೂ.ಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.