ಕೃಷಿ ಚಟುವಟಿಕೆಗಳಿಗೆ ತಟ್ಟಿದ ತೈಲ ಬೆಲೆ ಏರಿಕೆ ಬಿಸಿ
ಚಿಕ್ಕೋಡಿ : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾದರೂ ದಿನ ನಿತ್ಯ ಬಳಸುವ ವಸ್ತುಗಳ ಕೂಡ ಏರಿಕೆಯಾಗುತ್ತದೆ ಅನ್ನೋದು ತಿಳಿದಿರುವ ವಿಚಾರವೇ. ಆದ್ರೆ ಇದೀಗ ಕೃಷಿ ಚಟುವಟಿಕೆಗಳ ಮೇಲೂ ಕೂಡ ತೈಲ ಬೆಲೆ ಏರಿಕೆ ಪರಿಣಾಮ ಬೀರಿದೆ.
ಕೊರೊನಾ ಹೊಡೆತಕ್ಕೆ ಈಗಾಗಲೇ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಪೆಟ್ರೋಲ್. ಡಿಸೇಲ್ ಬೆಲೆ ಏರಿಕೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಟ್ರ್ಯಾಕ್ಟರ್ ಮಾಲೀಕರು ಹೆಚ್ಚಿಗೆ ಬಾಡಿಗೆ ಕೇಳುತ್ತಿದ್ದಾರೆ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಯಂತ್ರವನ್ನೇ ಅವಲಂಬಿಸಿರುವ ಸಣ್ಣ, ಮಧ್ಯಮ ಹಂತದ ರೈತರು ಒಟ್ಟಾರೆ ವೆಚ್ಚದಲ್ಲಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಯಂತ್ರದ ಬಾಡಿಗೆಗೆ ಸುರಿಯುವಂತಾಗಿದೆ. ಡಿಸೇಲ್ ದರ ಏರಿಕೆಯಿಂದ ಬಾಡಿಗೆಗೆ ಟ್ರ್ಯಾಕ್ಟರ್ ನೀಡುವ ಮಾಲೀಕರು ಯಂತ್ರೋಪಕರಣದ ಬಾಡಿಗೆ ದರ ಹೆಚ್ಚಿಸಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ.