ಬೆಂಗಳೂರು : ಎಪಿಎಂಸಿ, ಭೂಸುಧಾರಣ ಕಾಯ್ದೆ, ಕೃಷಿ ಮಸೂದೆ ವಿರೋಧಿಸಿ ನಗರದಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಈ ವಿಚಾರವಾಗಿ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿ ಇದು ಕಾಂಗ್ರೆಸ್ ನವರ ಪ್ರಚೋದನೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಹಾಗೂ ಸೈದ್ಧಾಂತಿಕ ವಿರೋಧ ಇರುವವರು ಮಸೂದೆಗಳ ಬಗ್ಗೆ ರೈತರಿಗೆ ತಪ್ಪು ಮಾಹಿತಿ ನೀಡಿ ಪ್ರಚೋದನೆ ಮಾಡಲಾಗಿದೆ.
ಈ ಮೊದಲೇ ನಂಜುಂಡಸ್ವಾಮಿ ಅವರು ನಮಗೆ ಮಾರುಕಟ್ಟೆ ಮುಕ್ತವಾಗಬೇಕೆಂದು ಒತ್ತಿ ಹೇಳಿದ್ದರು. ಅವರ ಆಶಯವನ್ನು ಈಡೇರಿಸುವ ಕೆಲಸ ಮೋದಿ ಮಾಡಿದ್ದಾರೆ.
ಆದರೆ, ಇದರ ಸದಾಶಯವನ್ನ ಅರ್ಥ ಮಾಡಿಕೊಂಡಿಲ್ಲ. ನಿಮ್ಮ ಹೋರಾಟ ದಲ್ಲಾಳಿಗಳಿಗೆ ಶಕ್ತಿ ಕೊಡಲಿದೆ. ರೈತರಿಗೆ ಅನ್ಯಾಯ ಮಾಡುವ ಯಾವ ಉದ್ದೇಶವೂ ಮೋದಿ ಅವ್ರಿಗೆ ಇಲ್ಲ ಎಂದು ಹೇಳಿದ್ದಾರೆ.
ಮುಂದುವರಿದು, ಕೇಂದ್ರ ಜಾರಿ ತಂದಿರುವ ಮಸೂದೆಯನ್ನೂ ಒಮ್ಮೆ ನೋಡೋಣ.. ಸರಿ ಇಲ್ಲ ಅಂದ್ರೆ ಕಾಯ್ದೆಯನ್ನ ವಾಪಸ್ಸು ಪಡೆಯೋಣ ಎಂದ ರವಿ, ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಬಹುತೇಕ ನಾಯಕರು ರೈತರೇ.
ಕಾಂಗ್ರೆಸ್, ಕಮ್ಯುನಿಸ್ಟ್ ಹೋರಾಟ ದಲ್ಲಾಳಿಗಳ ಪರ ಇದೆ. ಇವರು ರೈತರನ್ನ ಪ್ರಚೋದಿಸುತ್ತಿದ್ದಾರೆ ಎಂದು ಹರಿಹಾಯ್ದರು.








